ಧರ್ಮ ಸ್ಥಾಪನೆ ಸರಿ, ಆದರೆ ಧರ್ಮದ ಹಾದಿಯಲ್ಲಿ ನಡೆದ ಭೀಷ್ಮ, ದ್ರೋಣ, ಕರ್ಣರ ಅಂತ್ಯಕ್ಕೆ ಕಾರಣವೇನು ಗೊತ್ತಾ?

ಧರ್ಮ ಸ್ಥಾಪನೆ ಸರಿ, ಆದರೆ ಧರ್ಮದ ಹಾದಿಯಲ್ಲಿ ನಡೆದ ಭೀಷ್ಮ, ದ್ರೋಣ, ಕರ್ಣನ ಅಂತ್ಯಕ್ಕೆ ಕಾರಣವೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಮಹಾ ಭಾರತ ಹಾಗೂ ರಾಮಾಯಣದಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಹಿಂದೆಯೂ ಒಂದು ಕಾರಣವಿರುತ್ತದೆ. ಆ ಕಾರಣವು ಯಾವ ರೀತಿ ಮನುಜ ಧರ್ಮದ ಹಾದಿಯಲ್ಲಿ ನಡೆಯಬೇಕು ಹಾಗೂ ಯಾವ ಯಾವ ಕೆಲಸಗಳನ್ನು ಮಾಡಲೇಬಾರದು ಎಂಬುದನ್ನು ನೀಡುವ ಸ್ಪಷ್ಟ ಸಂದೇಶ ಮಾರ್ಗಗಳಾಗಿವೆ. ಪ್ರತಿಯೊಂದು ಘಟನೆಯ ಹಿಂದೆಯೂ ಪ್ರತಿಯೊಬ್ಬರ ಜೀವನಕ್ಕೂ ಸರಿ ಹೊಂದುವಂತಹ ಮಹತ್ವದ ಪಾಠಗಳನ್ನು ನೀಡುತ್ತಾ ಯಾವ ರೀತಿಯ ಹಾದಿಯಲ್ಲಿ ನಡೆದರೇ ಧರ್ಮದ ಹಾದಿಯಲ್ಲಿ ನಡೆಯುತ್ತೇವೆ ಎಂಬುದನ್ನು ತೋರಿಸಿ ಕೊಡುತ್ತದೆ. ಇನ್ನು ಮಹಾ ಭಾರತದ ವಿಷಯದ ಕುರಿತು ಮಾತನಾಡುವುದಾದರೆ ಶ್ರೀ ಕೃಷ್ಣನು ಹಲವಾರು ನಾಟಕ, ತಂತ್ರ ಮತ್ತು ತನ್ನದೇ ಆದ ರೀತಿಯಲ್ಲಿ ಯೋಜನೆಗಳನ್ನು ಹೂಡುವ ಮೂಲಕ ಶಸ್ತ್ರಾಸ್ತ್ರ ಬಳಸದೆ ಪಾಂಡವರನ್ನು ಗೆಲ್ಲಿಸಿಕೊಟ್ಟಿದ್ದ. ಅಸಲಿಗೆ ಶ್ರೀ ಕೃಷ್ಣನು ತಾನೇ ಧರ್ಮ ಸ್ಥಾಪನೆ ಮಾಡಬೇಕು ಎಂದು ಕೊಂಡಿದ್ದರೇ ಆತನಿಗೆ ಪಾಂಡವರ ಅಗತ್ಯವಾಗಲಿ ಅಥವಾ ಇನ್ಯಾವುದೇ ಸೇನೆಯ ಅಗತ್ಯತೆ ಇರಲಿಲ್ಲ. ತಾನು ಕೂಡ ಯುದ್ಧ ಮಾಡುವ ಅವಶ್ಯಕತೆ ಕೂಡ ಇರಲಿಲ್ಲ, ಕೇವಲ ಸುದರ್ಶನ ಚಕ್ರ, ಗರುಡ ದೇವ ಅಥವಾ ತನ್ನ ಮಾಯೆಗಳಿಂದ ಅಧರ್ಮದ ಹಾದಿಯಲ್ಲಿ ನಡೆಯುತ್ತಿರುವ ಎಲ್ಲಾ ಜನರನ್ನು ಕ್ಷಣ ಮಾತ್ರದಲ್ಲಿ ಸೋಲಿಸಿ ಬಿಡಬಹುದಾಗಿತ್ತು.

18 ದಿನಗಳ ಕಾಲ ಅರ್ಜುನನಿಗೆ ಸಾರಥಿಯಾಗಿ ಕೆಲಸ ಮಾಡುವ ಅಗತ್ಯತೆ ಕೂಡ ಇರಲಿಲ್ಲ. ಇದರಿಂದ ಶ್ರೀ ಕೃಷ್ಣ ಕೇವಲ ಧರ್ಮ ಸ್ಥಾಪಿಸಲು ಮಾತ್ರ ಮಹಾ ಭಾರತ ಯುದ್ಧ ನಡೆಯುವಂತೆ ಮಾಡಲಿಲ್ಲ ಎಂಬುದು ಕೃಷ್ಣನ ನಡೆಯಿಂದ ನಮಗೆಲ್ಲರಿಗೂ ಅರ್ಥವಾಗುತ್ತದೆ. ಹೌದು ಸ್ನೇಹಿತರೇ, ಕೃಷ್ಣ ಅಧರ್ಮವನ್ನು ಅಂತ್ಯಗೊಳಿಸಿ, ಮುಂದಿನ ಯುಗಯುಗಗಳಿಗೂ ಮನುಜರು ಯಾವ ರೀತಿ ಬದುಕ ಬೇಕು ಎಂಬುದನ್ನು ಜಗತ್ತಿಗೆ ಸಾರಲು ಹೊರಟಿದ್ದಾರೆ ಎಂದರೆ ತಪ್ಪಾಗ ಲಾರದು. ಇಂದು ಕೂಡ ನಾವು ಅದೇ ರೀತಿಯ ಒಂದು ಜೀವನ ಪಾಠದ ಕಥೆಯನ್ನು ನಿಮಗೆ ತಿಳಿಸಿ ಕೊಡುತ್ತೇವೆ ಕೇಳಿ. ಹೌದು, ಖಂಡಿತ ಈ ಘಟನೆ ,ರುಕ್ಮಿಣಿಯ ಪ್ರಶ್ನೆ ಹಾಗೂ ಕೃಷ್ಣನ ಉತ್ತರ ಕೇಳಿದರೇ ನಿಮಗೆಲ್ಲರಿಗೂ ಒಂದು ಜೀವನ ಪಾಠ ಸಿಕ್ಕೆ ಸಿಗುತ್ತದೆ.

ಮೊದಲಿಗೆ ಸ್ನೇಹಿತರೇ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಪರ ಹಲವಾರು ಮಹಾನ್ ವ್ಯಕ್ತಿಗಳು ಯುದ್ಧದಲ್ಲಿ ಪಾಲ್ಗೊಂಡಿದ್ದರು. ಕೌರವರನ್ನು ಅಂತ್ಯಗೊಳಿಸಿ ಧರ್ಮ ಸ್ಥಾಪಿಸುವುದು ಹಾಗೂ ಪಾಂಡವರ ರಾಜ್ಯವನ್ನು ವಾಪಸ್ಸು ಪಡೆಯುವುದು ಮಹಾ ಭಾರತದ ಯುದ್ಧದ ಪ್ರಮುಖ ಉದ್ದೇಶವಾಗಿತ್ತು ಎಂಬುದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವ ಸಂಗತಿ. ಆದರೆ ಈ ಧರ್ಮ ಸ್ಥಾಪನೆ,‌ ರಾಜ್ಯವನ್ನು ವಾಪಸ್ಸು ಪಡೆದು ಕೊಳ್ಳುವುದು ಎಂಬ ಉತ್ತರಗಳನ್ನು ಕೇಳಿದ ತಕ್ಷಣ ಬಹುತೇಕರಿಗೆ ಮನದಲ್ಲಿ ಮೂಡುವ ಪ್ರಶ್ನೆ ಎಂದರೇ ಕೃಷ್ಣನ ಪಾಂಡವರನ್ನು ಗೆಲ್ಲಿಸುವುದು ಸರಿ, ಧರ್ಮ ಸ್ಥಾಪಿಸುವುದು ಕೂಡ ಸರಿ, ಆದರೆ ಪಾಂಡವರ ಪರವಾಗಿಯೂ ಕೂಡ ಹಲವಾರು ಮಹಾನ್ ವ್ಯಕ್ತಿಗಳು ತಮ್ಮ ಜೀವನದ ಉದ್ದಕ್ಕೂ ಧರ್ಮ ಪಾಲಿಸಿದ ಮಹಾನ್ ವ್ಯಕ್ತಿಗಳು ಯುದ್ಧದಲ್ಲಿ ಪಾಲ್ಗೊಂಡಿದ್ದರು. ಶ್ರೀ ಕೃಷ್ಣನ ಯುದ್ಧದಲ್ಲಿ ಪಾಂಡವರಿಗೆ ಕೇವಲ ಕೌರವರನ್ನು ಮಾತ್ರ ಅಂತ್ಯಗೊಳಿಸಿ ಭೀಷ್ಮ ಪಿತಾಮಹ, ದ್ರೋಣಾಚಾರ್ಯ ಹಾಗೂ ಕರ್ಣನು ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದಾರೆ ಅವರನ್ನು ಏನು ಮಾಡಬೇಡಿ ಎಂದು ಹೇಳಬಹುದಿತ್ತಲ್ಲವೇ? ಆದರೆ ಕೃಷ್ಣ ಯಾಕೆ ಆ ಕೆಲಸವನ್ನು ಮಾಡಲಿಲ್ಲ? ಎಂಬ ಪ್ರಶ್ನೆಗಳು ಮೂಡುತ್ತವೆ.

ಮಹಾ ಭಾರತ ಯುದ್ಧ ನಡೆದ ಮೇಲೆ ಶ್ರೀ ಕೃಷ್ಣನ ದ್ವಾರಕೆ ಗೆ ವಾಪಸು ತೆರಳಿದಾಗ ನಿಮ್ಮೆಲ್ಲರ ಪ್ರಶ್ನೆಯೇ ರುಕ್ಮಿಣಿ ಅವರಲ್ಲಿ ಕೂಡ ಮೂಡುತ್ತದೆ. ರುಕ್ಮಿಣಿ ರವರು ಕೋಪಗೊಂಡು ಶ್ರೀ ಕೃಷ್ಣನನ್ನು ಪ್ರಶ್ನಿಸುತ್ತಾರೆ, ಭೀಷ್ಮ, ದ್ರೋಣಾಚಾರ್ಯರು ಹಾಗೂ ಕರ್ಣನು ತಮ್ಮ ಜೀವನದ ಉದ್ದಕ್ಕೂ ಧರ್ಮ ಪಾಲನೆ ಮಾಡುತ್ತಾ ಬಂದಿದ್ದಾರೆ. ಅವರು ಯಾವ ತಪ್ಪು ಮಾಡಿದ್ದಾರೆ, ಅವರನ್ನು ಯಾಕೆ ಯುದ್ಧದಲ್ಲಿ ನೀನು ಅಂತ್ಯಗೊಳಿಸಿದೆ ಅಥವಾ ಅಂತ್ಯಗೊಳಿಸಲು ಸಹಾಯ ಮಾಡಿದೆ, ಈ ಮೂವರು ಕೌರವರ ಪರ ಯುದ್ಧದಲ್ಲಿ ಪಾಲ್ಗೊಂಡಿದ್ದು ತಪ್ಪೇ? ಯುದ್ಧ ಎಂದ ಮೇಲೆ 2 ಕಡೆಗಳಲ್ಲಿ ಸೈನಿಕರು ಇರುತ್ತಾರೆ. ಅಷ್ಟಕ್ಕೆ ಯುದ್ಧದಲ್ಲಿ ಅವರನ್ನು ಕೊನೆಗೊಳಿಸುವ ಅಗತ್ಯವಾದರೂ ಏನಿತ್ತು ಎಂದು ಕೋಪದಿಂದ ಪ್ರಶ್ನೆ ಮಾಡುತ್ತಾರೆ. ಕರ್ಣನು ಕೂಡ ಮಹಾನ್ ದಾನಿಯಾಗಿದ್ದ, ಆತ ಯಾರು ಏನು ಕೇಳಿದರೂ ಇಲ್ಲ ಎಂದು ಕೂಡ ಹೇಳಿಲ್ಲ ಆಗಿದ್ದರೂ ಕೂಡ ಕರ್ಣನು ಯಾವ ಕಾರಣಕ್ಕೆ ಕುರುಕ್ಷೇತ್ರದಲ್ಲಿ ಹಸುನೀಗಬೇಕಿತ್ತು ಎಂದು ಪ್ರಶ್ನಿಸುತ್ತಾರೆ. ಇಲ್ಲೇ ನೋಡಿ ಉತ್ತರವನ್ನೇ ನೀಡುವಾಗ ಶ್ರೀ ಕೃಷ್ಣನು ನಮಗೆಲ್ಲರಿಗೂ ಒಂದು ಅತ್ಯುತ್ತಮ ಜೀವನ ಪಾಠವನ್ನು ಹೇಳಿದ್ದು,

ಮುಗುಳ್ನಗುತ್ತ ಕಾರಣಗಳ ಸಮಿತ ಶ್ರೀ ಕೃಷ್ಣನ ತನ್ನ ವಿವರಣೆಯನ್ನು ಆರಂಭಿಸುತ್ತಾನೆ. ಹೌದು ನಿಮ್ಮ ಮಾತು ಅಕ್ಷರಸಹ ಸತ್ಯ ಭೀಷ್ಮ ಪಿತಾಮಹರು, ದ್ರೋಣಾಚಾರ್ಯರು ಹಾಗೂ ಕರ್ಣನು ತಮ್ಮ ಜೀವನದ ಉದ್ದಕ್ಕೂ ಧರ್ಮದ ಹಾದಿಯಲ್ಲಿ ನಡೆದಿದ್ದಾರೆ, ಅವರು ಅಧರ್ಮದ ಹಾದಿಯಲ್ಲಿ ನಡೆದಿದ್ದಾರೆ ಎಂದು ನಾನು ಎಂದಿಗೂ ಹೇಳಿಲ್ಲ. ಇನ್ನು ಅವರ ಅಂತ್ಯಕ್ಕೆ ಕಾರಣವೇನೆಂದರೆ ಇಷ್ಟೆಲ್ಲಾ ಧರ್ಮದ ಹಾದಿಯಲ್ಲಿ ನಡೆದು ಧರ್ಮವನ್ನು ಪಾಲಿಸುತ್ತಿರುವ ಸಂದರ್ಭದಲ್ಲಿ ತುಂಬು ಸಭೆಯಲ್ಲಿ ದ್ರೌಪದಿ ವಸ್ತ್ರಾಭರಣ ನಡೆಯುತ್ತಿರುವಾಗ ಹಿರಿಯರ ಸ್ಥಾನದಲ್ಲಿ ನಿಂತು ಗೌರವಾನ್ವಿತವಾಗಿ ದ್ರೌಪದಿ ವಸ್ತ್ರಾಭರಣ ವನ್ನು ನಿಲ್ಲಿಸುವಂತೆ ಆದೇಶ ನೀಡಿ ಕೌರವರ ನಡೆಯನ್ನು ಪ್ರಶ್ನಿಸುವ ಎಲ್ಲಾ ಅರ್ಹತೆಗಳು ದ್ರೋಣಾಚಾರ್ಯರಿಗೆ ಹಾಗೂ ಭೀಷ್ಮ ಪಿತಾಮಹರಿಗೆ ಇದ್ದವು. ಆದರೆ ಅವರು ಯಾರು ತುಂಬಿದ ಸಭೆಯಲ್ಲಿ ಹೆಣ್ಣಿಗೆ ಈ ರೀತಿಯ ಪರಿಸ್ಥಿತಿ ಬಂದಾಗ ಮೌನವಾಗಿ ಕುಳಿತುಕೊಳ್ಳುವ ಮೂಲಕ ಧರ್ಮವನ್ನು ಮರೆತರು.

ಇನ್ನು ಕರ್ಣನ ಬಗ್ಗೆ ಹೇಳುವುದಾದರೆ, ಯುದ್ಧದ ಸಂದರ್ಭದಲ್ಲಿ ಅಭಿಮನ್ಯು ಮಹಾನ್ ಯೋಧರನ್ನು ಸೋಲಿಸಿದ ನಂತರ ಯುದ್ಧ ಭೂಮಿಯಲ್ಲಿ ಕರ್ಣನ ಬಳಿ ನೀರು ನೀಡುವಂತೆ ಮನವಿ ಮಾಡಿಕೊಳ್ಳುತ್ತಾನೆ. ತನ್ನ ಜೀವನದ ಉದ್ದಕ್ಕೂ ಹಲವಾರು ದಾನಗಳನ್ನು ಮಾಡಿರುವ ಕರ್ಣ ಯುದ್ಧದ ಸಂದರ್ಭದಲ್ಲಿ ತನ್ನ ಪಕ್ಕದಲ್ಲೇ ಇದ್ದ ನೀರಿನ ಕೊಳದಿಂದ ಅಭಿಮನ್ಯು ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿರುವ ಸಂದರ್ಭದಲ್ಲಿ ನೀರನ್ನು ನೀಡಲಿಲ್ಲ, ಕೊನೆಗೆ ಅದೇ ನೀರಿನ ಕೊಳದಲ್ಲಿ ಕರ್ಣನ ರಥದ ಚಕ್ರ ಸಿಲುಕಿಕೊಂಡಿತು, ಅಗತ್ಯವಿದ್ದ ಸಂದರ್ಭದಲ್ಲಿ ಭೂಮಿ ತಾಯಿ ಕೊಳದಲ್ಲಿದ್ದ ನೀರನ್ನು ಬಳಸಿಕೊಂಡು ಕರ್ಣನ ರಥದ ಚಕ್ರವನ್ನು ಹಿಡಿದು ಬಿಟ್ಟಳು. ಜೀವನದ ಉದ್ದಕ್ಕೂ ದಾನಮಾಡಿದ ಪುಣ್ಯಗಳ ಲೆಕ್ಕಗಳ ಜೊತೆ ಕೊನೆ ಕ್ಷಣದಲ್ಲಿ ಅಭಿಮನ್ಯು ರವರಿಗೆ ನೀರನ್ನು ನೀಡಲಿಲ್ಲ ಅದೇ ಆತನ ಅಂತ್ಯಕ್ಕೆ ಕಾರಣವಾಯಿತು ಎಂದನು.

ಇನ್ನು ಈ ಕಥೆಯ ನೀತಿ ಏನು ಎಂದರೇ, ನಮ್ಮ ಸುತ್ತಮುತ್ತ ಏನಾದರೂ ಅಧರ್ಮದ ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ನಾವು ಏನನ್ನು ಮಾಡುವುದಿಲ್ಲ ಮೂಕಪ್ರೇಕ್ಷಕರಾಗಿ ಘಟನೆಗೆ ಸಾಕ್ಷಿಯಾಗುತ್ತವೆ. ಯಾರೋ ಮಾಡುತ್ತಿರುವುದು ನಮಗೂ ಈ ಪಾಪದ ಕೆಲಸಕ್ಕೂ ಸಂಬಂಧವಿಲ್ಲ ಎಂದು ಅಂದುಕೊಂಡು ಸುಮ್ಮನಾಗಿ ಬಿಡುತ್ತೇವೆ. ಆದರೆ ಸಹಾಯ ಮಾಡುವ ಸ್ಥಿತಿ ಇದ್ದರೂ ಕೂಡ ಸಹಾಯ ಮಾಡದೇ ಇರುವವರು ಆ ಪಾಪದ ಸಮಾನ ಪಾಲುದಾರರಾಗುತ್ತಾರೆ. ದ್ರೋಣ ಮತ್ತು ಭೀಷ್ಮಾಚಾರ್ಯರಿಗೆ ಸಹಾಯ ಮಾಡುವ ಶಕ್ತಿ ಇತ್ತು, ಆದರೆ ಅವರು ಸಹಾಯಕ್ಕೆ ನಿಲ್ಲಲಿಲ್ಲ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಏನಾದರೂ ಅಧರ್ಮದ ಘಟನೆಗಳು ನಡೆದಾಗ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ಘಟನೆಗಳನ್ನು ತಪ್ಪಿಸುವ ಕೆಲಸ ಮಾಡಬೇಕು ಎಂದು ಹೇಳಲು ಹೊರಟಿದ್ದಾರೆ ಶ್ರೀಕೃಷ್ಣ.