ಕಾಡಿನಲ್ಲಿ ಕೃಷ್ಣ, ಸುಧಾಮನು ಜೀವನದಲ್ಲಿ ಸ್ನೇಹ ಹಾಗೂ ಸಂಬಂಧಗಳ ಬೆಲೆಯನ್ನು ತಿಳಿಸಿದ್ದು ಹೇಗೆ ಗೊತ್ತಾ?

ಕಾಡಿನಲ್ಲಿ ಕೃಷ್ಣ, ಸುಧಾಮನು ಜೀವನದಲ್ಲಿ ಸ್ನೇಹ ಹಾಗೂ ಸಂಬಂಧಗಳ ಬೆಲೆಯನ್ನು ತಿಳಿಸಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಶ್ರೀ ಕೃಷ್ಣನು ಕುರುಕ್ಷೇತ್ರ ಯುದ್ಧದ ಮೂಲಕ ಅಧರ್ಮವನ್ನು ಅಂತ್ಯಗೊಳಿಸಿ ಧರ್ಮ ಸ್ಥಾಪಿಸಿದನು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ವಿಷ್ಣುವಿನ ಸಂಪೂರ್ಣ ಅವತಾರವಾದ ಶ್ರೀ ಕೃಷ್ಣನು ತನ್ನ ಜೀವಿತಾವಧಿಯಲ್ಲಿ ಕೇವಲ ಅಧರ್ಮವನ್ನು ಅಂತ್ಯಗೊಳಿಸಿದಷ್ಟೇ ಅಲ್ಲದೇ ಮುಂದಿನ ಎಲ್ಲಾ ಯುಗಗಳಲ್ಲಿಯೂ ಜನರು ಯಾವ ರೀತಿ ತಮ್ಮ ಜೀವನವನ್ನು ಸಾಗಿಸಬೇಕು ಎಂಬುದಕ್ಕೆ ಹಲವಾರು ಉದಾಹರಣೆಗಳ ಮೂಲಕ ತನ್ನದೇ ಆದ ಶೈಲಿಯಲ್ಲಿ ಜೀವನ ಪಾಠಗಳನ್ನು ನೀಡಿ ನಮಗೆಲ್ಲರಿಗೂ ಮಾರ್ಗ ದರ್ಶಕನಾಗಿದ್ದಾನೆ. ಪ್ರತಿಯೊಂದು ಪೌರಾಣಿಕ ಘಟನೆಗಳ ಹಿಂದೆಯೂ ನಮಗೆಲ್ಲರಿಗೂ ಒಂದೊಂದು ಜೀವನ ಪಾಠ ಸಿಗುವುದು ನಿಶ್ಚಿತ. ಇಂದು ಕೂಡ ನಾವು ಕೃಷ್ಣ ಹಾಗೂ ‌ಕೃಷ್ಣನ ಸ್ನೇಹಿತ ಸುಧಾಮನ ನಡುವೆ ನಡೆದ ಒಂದು ಚಿಕ್ಕ ಘಟನೆಯನ್ನು ತಿಳಿದುಕೊಂಡು ಈ ಘಟನೆಯ ಮೂಲಕ ಶ್ರೀ ಕೃಷ್ಣ ಹಾಗೂ ಸುಧಾಮನು ನಮಗೆ ಸಾರುತ್ತಿರುವ ಅಂಶದ ಬಗ್ಗೆ ಅಥವಾ ಜೀವನ ಪಾಠದ ಬಗ್ಗೆ ತಿಳಿದು ಕೊಳ್ಳೋಣ.

ಸ್ನೇಹಿತರೇ, ಸಾಕ್ಷಾತ್ ಶ್ರೀ ಕೃಷ್ಣನು ಸ್ನೇಹ, ಪ್ರೀತಿ ಹಾಗೂ ಸಂಬಂಧ ಎಂಬ ಪದಗಳಿಗೆ ಅರ್ಥ ತುಂಬಿರುವುದು ಸುಳ್ಳಲ್ಲ. ಈಗೀನ ಕಾಲದಲ್ಲಿ ಪ್ರೀತಿ ಎಂದ ತಕ್ಷಣ ರೋಮಿಯೋ ಜೂಲಿಯೆಟ್ ಎನ್ನುವ ಯುವ ಪೀಳಿಗೆಯ ನಡುವೆ ಶ್ರೀ ಕೃಷ್ಣನು ದ್ವಾಪರ ಯುಗದಲ್ಲಿಯೇ ಪ್ರೀತಿ ಎಂದರೇ ಯಾವ ರೀತಿ ನಿಷ್ಕಲ್ಮಶ ಮನಸ್ಸಿನಿಂದ ಇರಬೇಕು ಎಂಬುದನ್ನು ತೋರಿಸಿದ್ದನು. ಇನ್ನು ಸ್ನೇಹದ ಬಗ್ಗೆ ಹೇಳುವುದಾದರೇ ಸಾಮಾನ್ಯ ಗೋಪಾಲಕನಾದ ದಿನದಿಂದ ಹಿಡಿದು ಶ್ರೀ ಕೃಷ್ಣನು ತಾನು ರಾಜನಾಗಿದ್ದ ದಿನಗಳ ವರೆಗೂ ತನ್ನ ಆಪ್ತ ಸ್ನೇಹಿತ ಸುಧಾಮನ ಜೊತೆ ನಡೆದು ಕೊಳ್ಳುತ್ತಿದ್ದ ರೀತಿಯ ಬಗ್ಗೆ ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಇನ್ನು ತನ್ನ ಸಂಬಂಧಿಕರಿಗಾಗಿ ಹಾಗೂ ತನ್ನ ರಾಜ್ಯದ ಪ್ರಜೆಗಳ ಜೀವ ರಕ್ಷಣೆಗಾಗಿ ತನ್ನ ರಾಜ್ಯ ಮಥುರಾವನ್ನು ಬಿಟ್ಟು ತನ್ನ ಇಡೀ ರಾಜ್ಯವನ್ನು ದ್ವಾರಕಾ ನಗರಕ್ಕೆ ಸ್ಥಳಾಂತರ ಮಾಡುವ ಮೂಲಕ ಸಂಬಂಧಗಳ ಬೆಲೆ ಏನು ಎಂಬುದನ್ನು ತೋರಿಸಿ ಕೊಟ್ಟಿದ್ದನು. ಕೃಷ್ಣ ಮನಸ್ಸು ಮಾಡಿದ್ದರೇ ಹಲವಾರು ಬಾರಿ ಜರಾಸಂಧನನ್ನು ಸೋಲಿಸಿದ ಬಳಿಕ ಇನ್ನೂ ಅಲ್ಲಿಯೇ ಅಧಿಕಾರ ನಡೆಸಿಕೊಂಡು ಮತ್ತೊಮ್ಮೆ ರಾಜ್ಯದ ಮೇಲೆ ದಂಡೆತ್ತಿ ಬಂದರೇ ಸೋಲಿಸಬಹುದು ಎಂಬ ಆತ್ಮ ವಿಶ್ವಾಸದಿಂದ ಮಧುರ ರಾಜ್ಯದಲ್ಲಿಯೇ ನೆಲೆಸಿರಬಹುದಾಗಿತ್ತು. ಆದರೆ ಪ್ರತಿಬಾರಿ ಜರಾಸಂಧ ತನ್ನ ಮೇಲೆ ದಂಡೆತ್ತಿ ಬಂದಾಗ ಗೆಲುವು ಸಾಧಿಸುತ್ತೇನೆ, ಆದರೆ ಆ ಗೆಲುವು ಸಾಧಿಸುವ ಸಂದರ್ಭದಲ್ಲಿ ನನ್ನ ರಾಜ್ಯದ ಸೈನಿಕರು, ರಾಜ್ಯದ ಜನತೆಯೂ ಕಷ್ಟ ಅನುಭವಿಸುವುದನ್ನು ನೋಡಲಾಗದೇ ತನ್ನ ಇಡೀ ರಾಜ್ಯವನ್ನು ದ್ವಾರಕಾ ನಗರಕ್ಕೆ ಸ್ಥಳಾಂತರಗೊಳಿಸಿದ್ದನು.

ಈ ಎಲ್ಲಾ ನಡೆಗಳ ಮೂಲಕ ಪ್ರೀತಿ, ಸ್ನೇಹ, ಸಂಬಂಧಗಳಿಗೆ ಮನುಜನು ಯಾವ ರೀತಿಯ ಬೆಲೆ ನೀಡಬೇಕು ಎಂಬುದನ್ನು ಶ್ರೀ ಕೃಷ್ಣನು ಅಂದೆ ತೋರಿಸಿ ಕೊಟ್ಟಿದ್ದನು. ಇಂದು ನಾವು ಅದೇ ರೀತಿಯ ಮತ್ತೊಂದು ಘಟನೆಯ ಬಗ್ಗೆ ತಿಳಿದು ಕೊಳ್ಳೋಣ. ಆದರೆ ಈ ಬಾರಿ ಸ್ನೇಹದ ಬೆಲೆ ತೋರಿಸಿದ್ದು ಶ್ರೀಕೃಷ್ಣನಷ್ಟೇ ಅಲ್ಲಾ ಬದಲಾಗಿ ಸುಧಾಮ. ಅಂದ ಹಾಗೆ ಭಗವಾನ್ ಶ್ರೀ ಕೃಷ್ಣನ ಅರಿವಿಲ್ಲದೆ ಈ ಘಟನೆ ನಡೆದಿಲ್ಲ, ಅಷ್ಟೇ ಅಲ್ಲಾ, ಇದು ಶ್ರೀ ಕೃಷ್ಣ ಹೂಡಿದ ತಂತ್ರವು ಇರಬಹುದು, ಯಾರಿಗೆ ತಾನೇ ತಿಳಿದಿದೆ? ಎಲ್ಲವನ್ನೂ ಮಾಡಿಸುವವನು ನಾನೇ ಎಂದು ಮಹಾ ಭಾರತದಲ್ಲಿ ಕೃಷ್ಣನೇ ಹೇಳಿದ್ದಾನೆ, ಆತನ ಸಾಕ್ಷಿ ಇಲ್ಲದೇ ಜೀವನದಲ್ಲಿ ಏನಾದರೂ ನಡೆಯಲು ಸಾಧ್ಯವೇ?? ಇನ್ನು ಈ ಘಟನೆಯ ಬಗ್ಗೆ ಹೇಳುವುದಾದರೇ ಒಮ್ಮೆ ಸುಧಾಮ ಹಾಗೂ ಶ್ರೀ ಕೃಷ್ಣನು ಕಾಡಿನಲ್ಲಿ ಸಂಚಾರಕ್ಕೆ ತೆರಳಿ ತಮ್ಮ ಕಾಲವನ್ನು ಕಳೆಯಲು ನಿರ್ಧಾರ ಮಾಡಿ ಸಂಚಾರಕ್ಕೆ ಹೊರಟರು. ಕಾಡಿನಲ್ಲಿ ಎಂದಿನಂತೆ ಕಾಲಹರಣ ಮಾಡುತ್ತಾ, ಮಾಡುತ್ತಾ ಕಾಡಿನ ಒಳಗೆ ಕಳೆದು ಹೋದರು. ಇಬ್ಬರು ದಟ್ಟವಾದ ಅರಣ್ಯದಿಂದ ವಾಪಸ್ಸು ಹೋಗುವ ದಾರಿಯನ್ನು ಮರೆತು ಬಿಟ್ಟರು. ದಾರಿಯನ್ನು ಮರೆತ ಬಳಿಕ ಇಡೀ ಕಾಡಿನಲ್ಲಿ ವಾಪಸ್ಸು ತೆರಳುವ ದಾರಿಗಾಗಿ ಹುಡುಕಿ, ಹುಡುಕಿ ಸುಸ್ತಾದರು. ಬಾಯಾರಿಕೆ ಹಾಗೂ ಹಸಿವಿನಿಂದ ಬಳಲಲು ಆರಂಭಿಸಿದರು, ಇದೇ ಸಂದರ್ಭದಲ್ಲಿ ಇನ್ನು ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು ಕೊಂಚ ಸಮಯ ವಿಶ್ರಾಂತಿ ಪಡೆಯಲು ಒಂದು ಮರದ ಕೆಳಗೆ ಆಶ್ರಯ ಪಡೆದು ಕೊಂಡರು.

ಹೊಟ್ಟೆ ಬಹಳ ಹಸಿದಿರುವ ಸಂದರ್ಭದಲ್ಲಿ ಶ್ರೀ ಕೃಷ್ಣನು ವಿಶ್ರಾಂತಿ ಪಡೆದು ಕೊಳ್ಳುವಾಗ ಅಲ್ಲಿಯ ಮರದ ಮೇಲೆ ನೇತಾಡುತ್ತಿದ್ದ ಒಂದು ಹಣ್ಣನ್ನು ಕಂಡನು. ಕೂಡಲೇ ತಡ ಮಾಡದೇ ಶ್ರೀ ಕೃಷ್ಣನು ಮರವನ್ನು ಹತ್ತಿ ಬಿಟ್ಟನು, ಕೆಲವೇ ಕ್ಷಣದಲ್ಲಿ ಹಣ್ಣನ್ನು ಕಿತ್ತುಕೊಂಡು ಕೆಳಗಡೆ ಇಳಿದು ಇಬ್ಬರು ಹಸಿದಿದ್ದೇವೆ ಈ ಹಣ್ಣನ್ನು ಹಂಚಿಕೊಂಡು ತಿನ್ನೋಣ ಎಂದು ಶ್ರೀ ಕೃಷ್ಣನು ತಾನು ಕಿತ್ತ ಹಣ್ಣನ್ನು ಸರಿಯಾಗಿ ಆರು ಭಾಗ ಮಾಡಿದನು. ಮೊದಲಿನಿಂದಲೂ ಸುಧಾಮ ಇದ್ದ ಸಂದರ್ಭದಲ್ಲಿ ಶ್ರೀ ಕೃಷ್ಣನು ಮೊದಲಿಗೆ ಯಾವುದನ್ನು ಸೇವಿಸುತ್ತಿರಲಿಲ್ಲ ಮೊದಲ ಭಾಗ ಎಂದಿಗೂ ಸುಧಾಮನಿಗೆ ನೀಡುತ್ತಿದ್ದನು. ಈ ಬಾರಿಯೂ ಕೂಡ 6 ಭಾಗ ಮಾಡಿದ ಹಣ್ಣಿನ ಮೊದಲ ಭಾಗವನ್ನು ಸುಧಾಮನಿಗೆ ನೀಡಿದನು, ಸುಧಾಮನ ಹಣ್ಣು ತಿಂದ ತಕ್ಷಣ ಬಹಳ ಚೆನ್ನಾಗಿದೆ, ಸಾಕಷ್ಟು ಸ್ವಾದಿಷ್ಟಕರವಾಗಿದೆ. ದಯವಿಟ್ಟು ನೀನು ಮತ್ತೊಂದು ಭಾಗವನ್ನು ತೆಗೆದುಕೊಳ್ಳುವ ಮುನ್ನ ನನಗೆ ಮತ್ತೊಂದು ಭಾಗವನ್ನು ನೀಡು ಎಂದು ಸುಧಾಮ ಒತ್ತಾಯ ಮಾಡಿದನು, ಸ್ನೇಹಿತ ಕೇಳಿದೆಯೇ ಎಲ್ಲವನ್ನೂ ನೀಡುವ ಶ್ರೀ ಕೃಷ್ಣನು ಇನ್ನು ಸುಧಾಮ ಕೇಳಿದರೇ ನೀಡದೆ ಇರುತ್ತಾನೆಯೇ?? ಶ್ರೀಕೃಷ್ಣನು ಎರಡನೇ ಭಾಗವನ್ನು ಸುಧಾಮನಿಗೆ ನೀಡಿದನು. ಎರಡನೇ ಭಾಗವನ್ನು ತಿಂದು ಮುಗಿಸಿದ ಸುಧಾಮನ ಮತ್ತೊಂದು ಭಾಗವನ್ನು ನೀಡುವಂತೆ ಕೇಳಿ ಕೊಂಡನು, ಹೀಗೆ ಕೇಳುತ್ತಾ, ಕೇಳುತ್ತಾ ಹಣ್ಣಿನ 5 ಭಾಗಗಳನ್ನು ಸುಧಾಮನು ಮುಗಿಸಿ ಬಿಟ್ಟನು. ಇನ್ನು ಉಳಿದಿರುವುದು ಕೇವಲ ಕೊನೆಯ ಭಾಗ, 5 ಭಾಗಗಳನ್ನು ತಿಂದರೂ ಕೂಡ ಸುಧಾಮನು ನನಗೆ ಮತ್ತಷ್ಟು ಹಸಿವಾಗುತ್ತಿದೆ. ಕೊನೆಯ ಭಾಗವನ್ನು ಕೂಡ ನನಗೆ ನೀಡುವ ಎಂದು ಒತ್ತಾಯ ಮಾಡಿದನು.‌

ಈ ಮಾತು ಕೇಳಿದ ಕೂಡಲೇ ಕೃಷ್ಣನಿಗೆ ಕೋಪ ಬಂದಿತ್ತು. 6 ಭಾಗ ಮಾಡಿದ ಹಣ್ಣಿನಲ್ಲಿ 5 ಭಾಗಗಳನ್ನು ನೀನೇ ಸಂಪೂರ್ಣವಾಗಿ ತಿಂದು ಬಿಟ್ಟಿದ್ದೀಯಾ, ನಾನು ಕೂಡ ನಿನ್ನ ಜೊತೆ ಕಾಡನ್ನು ಅಲೆದು ಸುಸ್ತಾಗಿದ್ದೇನೆ ಹಾಗೂ ಹಸಿದಿದ್ದೇನೆ ಎಂಬುದನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದೀಯಾ, ನಾನು ನಿನ್ನನ್ನು ಪ್ರೀತಿಸುತ್ತೇನೆ. ಅದೇ ಕಾರಣಕ್ಕಾಗಿ ನಿನಗೆ ಐದು ಭಾಗಗಳನ್ನು ನೀಡಿದ್ದೇನೆ. ಆದರೂ ಕೂಡ ನೀನು ಈ ಕೊನೆಯ ಭಾಗವನ್ನು ಕೃಷ್ಣ ತಿನ್ನಲಿ ಎಂದು ಅಂದು ಕೊಳ್ಳಲಿಲ್ಲ, ನಿನಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಹೇಳಿದನು. ಹೀಗೆ ಹೇಳಿದ ಬಳಿಕ ಕೃಷ್ಣನ ಕೋಪದಿಂದ ಕೊನೆಯ ಭಾಗವನ್ನು ತೆಗೆದುಕೊಂಡು ತಿನ್ನಲು ಆರಂಭಿಸಿದನು. ಆದರೆ ಹಣ್ಣು ಬಹಳ ಕಹಿಯಾಗಿತ್ತು, ತಿನ್ನಲು ಕೂಡ ಆಗುತ್ತಿರಲಿಲ್ಲ. ಕೂಡಲೇ ಶ್ರೀ ಕೃಷ್ಣನು ಹಣ್ಣನ್ನು ಉಗುಳಿದನು ಹಾಗೂ ಸುಧಾಮನಿಗೆ ಕೋಪದಿಂದ ನಿನಗೆ ಬುದ್ಧಿ ಇಲ್ಲವೇ ಇಂತಹ ಕಹಿ ಹಣ್ಣನ್ನು ಸ್ವಾದಿಷ್ಟಕರ ಎಂದು ತಿನ್ನುತ್ತೀದ್ದೀಯಾ, ನಿನಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದನು.

ಈ ಮಾತುಗಳನ್ನು ಕೇಳಿದ ಸುಧಾಮನು, ಕೃಷ್ಣ ನಿನ್ನ ಅಮೃತ ಹಸ್ತದಿಂದ ಸಾವಿರಾರು ಬಾರಿ ನನ್ನ ಹೊಟ್ಟೆ ತುಂಬಿಸಿದ್ದೀಯಾ, ಸಾವಿರಾರು ಬಾರಿ ಸಿಹಿಯಾದ ಹಣ್ಣುಗಳನ್ನು ನೀಡಿದ್ದೀಯಾ, ಈ ಒಂದು ಬಾರಿ ಕಹಿ ಹಣ್ಣನ್ನು ನೀಡಿದ ತಕ್ಷಣ ನಾನು ನೀನು ನೀಡಿದ ಹಣ್ಣು ಕಹಿಯಾಗಿದೆ ಎಂದು ಹೇಗೆ ಹೇಳಲಿ, ಹಾಗೂ ನೀನು ನೀಡಿದ ಹಣ್ಣುಗಳನ್ನು ಹೇಗೆ ತಿರಸ್ಕಾರ ಮಾಡಲಿ. ಅಷ್ಟೇ ಅಲ್ಲದೇ ನನಗೆ ಆದ ಅನುಭವ ನಿನಗೆ ಆಗಬಾರದು, ಅದೇ ಕಾರಣಕ್ಕಾಗಿ ಎಲ್ಲಾ 6 ಭಾಗವನ್ನು ನಾನೇ ತಿನ್ನಲು ಬಯಸಿದೆ ಎಂದು ಉತ್ತರ ನೀಡಿದನು. ಈ ಕಥೆಯ ಮೂಲಕ ನಮಗೆ ತಿಳಿದು ಬರುವುದೇನೆಂದರೆ ಸ್ನೇಹಿತರೇ ಇಲ್ಲಿ ಸ್ನೇಹ, ಪ್ರೀತಿ ಹಾಗೂ ಸಂಬಂಧಗಳು ಗಟ್ಟಿಯಾಗಿ ಇರುತ್ತದೆಯೋ ಅಲ್ಲಿ ಯಾವುದೇ ಸಂದೇಹಕ್ಕೆ ಅವಕಾಶ ಇರುವುದಿಲ್ಲ ಹಾಗೂ ಆ ರೀತಿಯ ಸಂಬಂಧಗಳನ್ನು ನಾವು ಮತ್ತಷ್ಟು ಗಟ್ಟಿಗೊಳಿಸುತ್ತಾ ಸಾಗಬೇಕು, ಯಾವುದೋ ಒಂದು ಹಂತದಲ್ಲಿ ಕಹಿ ಘಟನೆ ಅಥವಾ ಕಹಿ ಅನುಭವ ಆದ ತಕ್ಷಣ ಹಿಂದೆ ನಡೆದಿರುವ ಸಿಹಿ ಕಟನೆ ಹಾಗೂ ಸಿಹಿ ಅನುಭವಗಳನ್ನು ಮರೆತು ಸ್ನೇಹ, ಪ್ರೀತಿ ಸಂಬಂಧಗಳಿಗೆ ಅಂತ್ಯ ಹಾಡುವ ಮುನ್ನ ಹಳೆಯ ಅನುಭವವನ್ನು ನೆನಪು ಮಾಡಿಕೊಂಡು ಆ ಕ್ಷಣವನ್ನು ಮರೆತು ಜೀವನದಲ್ಲಿ ಮುಂದೆ ಸಾಗುತ್ತಾ ಹೋಗಬೇಕು ಎಂಬುದೇ ಈ ಘಟನೆಯ ಮೂಲ ಉದ್ದೇಶ.