ಕೃಷ್ಣನ ಆಜ್ಞೆಯ ಮೇರೆಗೆ ಪಾಂಡವರು ಕೂಡ ಆಚರಿಸಿದ ಅನಂತ ಚತುರ್ದಶಿ ಹಬ್ಬದ ಹಿನ್ನೆಲೆ, ಆಚರಣೆ ಮತ್ತು ಮಹತ್ವಗಳ ಬಗ್ಗೆ ಇಲ್ಲಿದೆ ಡೀಟೇಲ್ಸ್.

ನಮಸ್ಕಾರ ಸ್ನೇಹಿತರೇ, ಅನಂತ ಎಂದರೆ ಚೈತನ್ಯ ರೂಪದ ಶಕ್ತಿ, ಇದನ್ನು ಅಂತ್ಯವಿಲ್ಲದ್ದು ಎಂದು ಕೂಡಾ ಕರೆಯುತ್ತಾರೆ. ಭಾದ್ರಪದ ಶುಕ್ಲ ಪಕ್ಷದ ಚತುರ್ಥಿ ತಿಥಿಯಿಂದ ಚತುರ್ದಶಿ ತಿಥಿಯವರೆಗಿನ ಅವಧಿಯಲ್ಲಿ ಈ ಹಬ್ಬವನ್ನು ದೇಶಾದ್ಯಂತ ಜನರು ಅತೀ ಸಡಗರದಿಂದ, ಅತೀ ಭಕ್ತಿಯಿಂದ, ನಿಷ್ಠೆಯಿಂದ ಆಚರಿಸುತ್ತಾರೆ. ಅಷ್ಟೇ ಮಾತ್ರವಲ್ಲ ಈ 14 ದಿನಗಳು ವಿನಾಯಕನ ತತ್ವಗಳು ಜಗತ್ತಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುತ್ತದೆ ಎಂಬ ನಂಬಿಕೆ ಜನರ ಮನದಲ್ಲಿದೆ.

ಭಾರತದಲ್ಲಿ ಅನಂತ ವ್ರತದ ಆಚರಣೆಯಾ ಬಗ್ಗೆ ಹೇಳುವುದಾದರೇ, ಈ ಹಬ್ಬವನ್ನು ಉತ್ತರ ಭಾರತದ ಉತ್ತರ ಪ್ರದೇಶ, ಬಿಹಾರ, ಗುಜರಾತ್, ದೆಹಲಿ ಹಾಗೂ ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ, ಕೇರಳಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸಡಗರದಿಂದ ಆಚರಿಸಲಾಗುತ್ತದೆ. ಅಷ್ಟೇ ಮಾತ್ರವಲ್ಲ ಈ ಅನಂತ ಚತುರ್ದಶಿ ವ್ರತವನ್ನು ಕರಾವಳಿಯ ತುಳು ಭಾಷೆಯಲ್ಲಿ “ನೋಂಪು” ಎಂದು ಕರೆಯುತ್ತಾರೆ. ಈ ಹಿಂದೆ ಹೇಳಿದಂತೆ ಭಾದ್ರಪದ ಶುಕ್ಲ ಪಕ್ಷದ ಚತುರ್ದಶಿಯನ್ನು “ಅನಂತ ಚತುರ್ದಶಿ” ಎಂದು ಕರೆಯುತ್ತೇವೆ. ಈ ದಿನವು ಗಣೇಶ ಚತುರ್ಥಿ ಹಬ್ಬದ ಅಂತಿಮ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸಾಕಷ್ಟು ಜನ ವ್ರತಾಚರಣೆ ಮಾಡುತ್ತಾರೆ. ಏಕೆಂದರೆ ಈ ದಿನದಂದು ಜಗತ್ ರಕ್ಷಕನಾದ ಮಹಾ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ಹೊಂದಿದ್ದಾನೆ ಎಂಬ ನಂಬಿಕೆ ಇದೆ. ಶ್ರೀ ಅನಂತ ಪದ್ಮನಾಭನು ಭಕ್ತರ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರಿಸಿ ಅವರ ಸಂಪತ್ತು, ಸುಖ, ಆರೋಗ್ಯವನ್ನು ದಯಪಾಲಿಸುವನೆಂಬ ವಿಚಾರಗಳು ಪುರಾಣಗಳಲ್ಲಿ ಉಲ್ಲೇಖವಿದೆ.

ಅನಂತ ವ್ರತದ ಕಥೆಯಾ ಬಗ್ಗೆ ಹೇಳುವುದಾದರೇ, ಸುಮಂತ್ ಎಂಬ ಒರ್ವ ಬ್ರಾಹ್ಮಣನಿದ್ದನು. ಈತನ ಪತ್ನಿ ದೀಕ್ಷಾ ಹಾಗೂ ಸುಶಿಲಾ ಎಂಬ ಮಗಳು ಇದ್ದಳು. ದೀಕ್ಷಾ ಳ ಸಾವಿನ ನಂತರ ಸುಮಂತ್ ತನ್ನ ಮಗಳಾದ ಸುಶೀಲಾಗೆ ಸಾಕಷ್ಟು ತೊಂದರೆ ಕೊಟ್ಟು ನಂತರ ಕಾರ್ಕಶ್ ಎಂಬಾಕೆಯನ್ನು ವಿವಾಹವಾದರು. ಇತ್ತ ಕಡೆ ಸುಶೀಲಾ, ಕೌಂಡಿನ್ಯಾ ಎಂಬ ಮುನಿಯನ್ನು ಮದುವೆಯಾದಳು ಮತ್ತು ಮಲತಾಯಿಯ ಕಿರುಕುಳವನ್ನು ತಪ್ಪಿಸಲು ಅವರಿಬ್ಬರು ಮನೆ ಬಿಟ್ಟು ಹೋಗಲು ನಿರ್ಧರಿಸಿದರು. ದಾರಿಯಲ್ಲಿ ಅವರು ನದಿಯ ಬಳಿ ತಮ್ಮ ದಿನನಿತ್ಯದ ಚಟುವಟಿಕೆಗಳಿಗಾಗಿ ತಂಗಿದರು. ಕೌಂಡಿನ್ಯಾ ಸ್ನಾನ ಮಾಡಲು ಹೋದರು. ಈ ಸಂದರ್ಭದಲ್ಲಿ ಯಾವುದೋ ವಿಶೇಷವಾಗಿ ಪೂಜಿಸುತ್ತಿದ್ದ ಮಹಿಳೆಯರ ಗುಂಪಿನಲ್ಲಿ ಜೊತೆ ಸುಶೀಲಾ ರವರು ಸೇರಿಕೊಂಡರು. ಅವರು ನಾವುಗಳು “ಅನಂತ ವ್ರತ” ವನ್ನು ಆಚರಿಸುತ್ತಿದ್ದೇವೆ ಎಂದು ಸುಶೀಲಾಗೆ ತಿಳಿಸಿದರು. “ಇದು ಯಾವ ರೀತಿಯ ಪೂಜೆ? ಹೇಗೆ ಮಾಡುವುದು?” ಎಂದು ಸುಶೀಲಾ ಕೇಳಿದಳು.

ಸುಶೀಲಾಳ ಈ ಪ್ರಶ್ನೆಗೆ ಸಹಜವಾಗಿ ಆ ಮಹಿಳೆಯರು ಅನಂತ ವ್ರತದ ಆಚರಣೆಯ ಬಗ್ಗೆ ಸಂಪೂಣ ಮಾಹಿತಿ ನೀಡಿದರು. ಈ ವಿವರಣೆಯನ್ನು ಕೇಳಿ ಸಂತುಷ್ಟಳಾದ ಸುಶೀಲಾ ಳು ತಾನು ಕೂಡಾ ಪತಿಯ ಜೊತೆಗೂಡಿ ಅನಂತ ವ್ರತ ಆಚರಣೆ ತೆಗೆದುಕೊಳ್ಳಲು ನಿರ್ಧರಿಸಿದರು. ಆ ದಿನದಿಂದ ಅವಳು ಮತ್ತು ಕೌಂಡಿನ್ಯಾ ಪ್ರಗತಿ ಹೊಂದಲು ಪ್ರಾರಂಭಿಸಿದರು ಮತ್ತು ಬಹಳ ಶ್ರೀಮಂತರಾದರು. ಒಂದು ದಿನ ಕೌಂಡಿನ್ಯಾ ಸುಶೀಲಾಳ ಎಡಗೈಯಲ್ಲಿ ಅನಂತ ವ್ರತದ ದಾರವನ್ನು ಗಮನಿಸಿದನು. ಅದರ ಬಗ್ಗೆ ಪತ್ನಿಯನ್ನು ಕೇಳಿದಾಗ, ಸುಶೀಲಾ ಳು ಅನಂತ ವ್ರತದ ದಾರ ಎಂದು ಉತ್ತರಿಸಿದಾಗ ಅವರು ಕೋಪಗೊಂಡರು ಮತ್ತು ಅನಂತ ದೇವರ ಯಾವುದೇ ಪ್ರಭಾವ ಅಥವಾ ಅವರ ಶಕ್ತಿ ನಮ್ಮ ಜೀವನದ ಮೇಲೆ ಇರಲಿಲ್ಲ. ಎಲ್ಲವೂ ತನ್ನಿಂದಲೇ ತನ್ನ ಸ್ವಾ – ಸಾಮರ್ಥ್ಯ, ತನ್ನ ಬುದ್ಧಿವಂತಿಕೆಯಿಂದಲೇ ನಾವುಗಳು ಇಷ್ಟು ಶ್ರೀಮಂತರಾಗಿದ್ದೇವೆಂದು ತನ್ನನ್ನು ತಾನು ಸಮರ್ಥಿಸಿಕೊಂಡನು. ಮಾತ್ರವಲ್ಲ ಕೊನೆಗೆ ಕೌಂಡಿನ್ಯಾ ಮುನಿಯು ಕೋಪದಿಂದ ಸುಶೀಲಾಳ ಕೈಯಲ್ಲಿದ್ದ ಅನಂತ ವ್ರತದ ದಾರವನ್ನು ಕಿತ್ತು ಬೆಂಕಿಗೆ ಹಾಕಿದನು.

ಕೌಂಡಿನ್ಯ ಮುನಿಯ ಕೋಪದ ಪರಿಣಾಮ- ಇದಾದ ನಂತರ ಅವರ ಜೀವನದಲ್ಲಿ ಎಲ್ಲಾ ರೀತಿಯ ಆಪ’ತ್ತುಗಳು ಬಂದು ಒದಗಿದವು ಮತ್ತು ಆ ಎಲ್ಲಾ ಘಟನೆಗಳು ಅವರನ್ನು ತೀವ್ರ ಬಡತನಕ್ಕೆ ಕೊಂಡೊಯ್ಯಿತು. ಅನಂತ ದೇವರಿಗೆ ತಾನು ಮಾಡಿದ ಅಪಮಾನದಿಂದ ತನಗೆ ಈ ಶಿಕ್ಷೆ ಎಂದು ಕೌಂಡಿನ್ಯಾ ಮುನಿಯು ಅರ್ಥ ಮಾಡಿಕೊಂಡರು. ನಂತರ ಕೌಂಡಿನ್ಯ ಮುನಿಯು ದೇವರ ದರ್ಶನ ಪಡೆಯುವವರೆಗೂ ಕಠಿಣ ತಪಸ್ಸಿಗೆ ಒಳಗಾಗಬೇಕೆಂದು ನಿರ್ಧರಿಸಿದನು.

ಅನಂತ ದೇವರ ಹುಡುಕಾಟದಲ್ಲಿ ಕೌಂಡಿನ್ಯ ಮುನಿಯು ಕಾಡಿಗೆ ಹೋದನು. ಅಲ್ಲಿ ಮಾವಿನಕಾಯಿ ತುಂಬಿರುವ ಮರವೊಂದನ್ನು ನೋಡಿದನು, ಆದರೆ ಯಾರೂ ಕೂಡಾ ಆ ಮಾವಿನ ಕಾಯಿಗಳನ್ನು ತಿನ್ನುವುದಿಲ್ಲ. ಏಕೆಂದರೆ ಇಡೀ ಮರದ ಮೇಲೆ ಹುಳುಗಳು ದಾಳಿ ಮಾಡಿದ್ದವು. ಕೌಂಡಿನ್ಯ ಮುನಿಯು ಮರವನ್ನು ನೋಡಿ ಅನಂತ ಎಂಬುವವರನ್ನು ನೋಡಿದ್ದೀರಾ ಎಂದು ಕೇಳಿದರು. ಆದರೆ ಆ ಮರದಿಂದ ನಕಾರಾತ್ಮಕ ಉತ್ತರ ಸಿಕ್ಕಿತು. ನಂತರ ಕೌಂಡಿನ್ಯಾ ತನ್ನ ಕರು ಜೊತೆ ಹಸುವು ಒಂದು ಹುಲ್ಲನ್ನು ತಿನ್ನದೆ ಹುಲ್ಲಿನ ಮೈದಾನದಲ್ಲಿ ನಿಂತಿದೆ. ಮಾತ್ರವಲ್ಲ ಎರಡು ದೊಡ್ಡ ಸರೋವರಗಳು ಒಂದಕ್ಕೊಂದು ಸೇರಿಕೊಂಡು ತನ್ನ ನೀರು ಒಂದಕ್ಕೊಂದು ಬೆರೆಯುವುದನ್ನು ಗಮನಿಸಿದನು. ಅಷ್ಟೇ ಅಲ್ಲದೇ ನೋಡಿದ ಪ್ರತಿಯೊಬ್ಬರ ಬಳಿಯೂ ಕೌಂಡಿನ್ಯಾ ಮುನಿಯು ಅನಂತನ ಬಗ್ಗೆ ಕೇಳಿದರು, ಆದರೆ ಯಾರೂ ಈ ಹೆಸರನ್ನು ಕೇಳಿರಲಿಲ್ಲ. ಅವನು ಹತಾಶನಾದನು ಕೊನೆಗೆ ತನ್ನ ಜೀವನವನ್ನು ಅಂತ್ಯಗೊಳಿಸಲು ನಿರ್ಧರಿಸಿದನು. ಆಗ ಇದ್ದಕ್ಕಿದ್ದಂತೆ ಪೂಜ್ಯ ವೃದ್ಧ ಬ್ರಾಹ್ಮಣನು ಅವನ ಮುಂದೆ ಕಾಣಿಸಿಕೊಂಡನು.

ನಂತರ ಆ ವೃದ್ಧ ಬ್ರಾಹ್ಮಣನು ಕೌಂಡಿನ್ಯಾರನ್ನು ಒಂದು ಗುಹೆಯೊಂದಕ್ಕೆ ಕರೆದೊಯ್ದನು. ಆರಂಭದಲ್ಲಿ ಆ ಗುಹೆಯು ತುಂಬಾ ಕತ್ತಲೆಯಾಗಿತ್ತು. ಆದರೆ ತುಸು ಮತ್ತೆ ಮತ್ತೆ ಹೋದಂತೆಲ್ಲ ಆ ಗುಹೆಯೊಳಗೆ ಪ್ರಕಾಶಮಾನವಾದ ಬೆಳಕು ಕಾಣಿಸಿಕೊಂಡಿತು. ಹಾಗೆ ಹೋದಂತೆಲ್ಲ ಅವರು ದೊಡ್ಡ ಅರಮನೆಯನ್ನು ತಲುಪಿದರು. ಪುರುಷರು ಮತ್ತು ಮಹಿಳೆಯರ ಒಂದು ದೊಡ್ಡ ಸಭೆ ನೆರೆದಿದ್ದರು. ವೃದ್ಧ ಬ್ರಾಹ್ಮಣನು ನೇರವಾಗಿ ಸಿಂಹಾಸನದ ಕಡೆಗೆ ಹೋದನು.

ಅನಂತ ಹೆಸರಿನ ಮಹಾವಿಷ್ಣು- ಆದರೆ ಅಲ್ಲಿ ಕೌಂಡಿನ್ಯ ಮುನಿಗೆ ಒಂದು ಆಶ್ಚರ್ಯ ಕಾದಿತ್ತು. ಏಕೆಂದರೆ ಆ ವೃದ್ಧ ಬ್ರಾಹ್ಮಣನು ಅನಂತ ಹೆಸರಿನ ಮಹಾ ವಿಷ್ಣುವಾಗಿದ್ದನು. ತನ್ನನ್ನು ರಕ್ಷಿಸಲು ಅನಂತ (ಮಹಾವಿಷ್ಣು) ಸ್ವತಃ ಬಂದಿದ್ದಾನೆ ಎಂದರಿತ ಕೌಂಡಿನ್ಯ ಮುನಿಯು ಅನಂತ ದೇವರನ್ನು ಶಾಶ್ವತ ದೇವರೆಂದು ಅರಿತುಕೊಂಡನು. ಸುಶೀಲಾಳ ಕೈಯಲ್ಲಿರುವ ದಾರದಲ್ಲಿನ ಅನಂತ ದೇವರ ಪ್ರತಿಫಲನಾಶಕ್ತಿಯನ್ನು ಗುರುತಿಸುವಲ್ಲಿ ವಿಫಲವಾದ ಕಾರಣ ಅವನು ವಿಷ್ಣುವಿನ ಬಳಿ ತನ್ನ ಪಾ’ಪವನ್ನು ಒಪ್ಪಿಕೊಂಡನು. ನಂತರ ಮಹಾವಿಷ್ಣು ಕೌಂಡಿನ್ಯಾಗೆ 14 ವರ್ಷಗಳ ಅನಂತ ವ್ರತ ಆಚರಣೆ ಮಾಡಿದರೆ, ನಿನ್ನ ಎಲ್ಲಾ ಪಾಪಗಳಿಂದ ಮುಕ್ತನಾಗಿ ಮರಳಿ ಸಂಪತ್ತು, ಮಕ್ಕಳು ಮತ್ತು ಸಂತೋಷವನ್ನು ಪಡೆಯುವೆ ಎಂಬ ಭರವಸೆ ನೀಡಿದನು. ಅದರಂತೆ ಕೌಂಡಿನ್ಯ ಮುನಿಯು 14 ವರ್ಷಗಳ ಕಾಲ ಅನಂತ ವ್ರತವನ್ನು ಅಚ್ಚುಕಟ್ಟಾಗಿ, ನಿಷ್ಠೆಯಿಂದ, ಪ್ರಾಮಾಣಿಕವಾಗಿ, ದೈವಭಕ್ತಿಯಿಂದ ಆಚರಿಸಿ ತಾನು ಕಳೆದುಕೊಂಡ ಎಲ್ಲಾ ಸಂಪತ್ತು, ಆರೋಗ್ಯ, ಸುಖ ಶಾಂತಿಯನ್ನು ಮರಳಿ ಪಡೆದುಕೊಂಡನು.

ಅನಂತ ವ್ರತದ ಮತ್ತೊಂದು ಕಥೆ- ಮಹಾಭಾರತ ಕಾಲದಲ್ಲಿ ಕೌರವರ ಮೋಸದ ಆಟದಿಂದ ಪಾಂಡವರು ತಮ್ಮ ಸಾಮ್ರಾಜ್ಯವನ್ನು ಮತ್ತು ಸರ್ವಸ್ವವನ್ನೂ ಕಳೆದುಕೊಂಡರು. ಮಾತ್ರವಲ್ಲ 14 ವರ್ಷಗಳ ಕಾಲ ವನವಾಸವನ್ನು ಅನುಭವಿಸಬೇಕಾಯಿತು. ಈ ಕಾಲದಲ್ಲಿ ಶ್ರೀಕೃಷ್ಣನು ಅನಂತ ವ್ರತದ ಆಚರಣೆ ಮಾಡಿದರೆ ಕಳೆದು ಹೋದ ಎಲ್ಲಾ ರಾಜ್ಯಗಳನ್ನು ಮರಳಿ ಪಡೆಯಬಹುದೆಂಬ ಸೂಚನೆಯನ್ನು ಪಾಂಡವರಿಗೆ ಕೊಟ್ಟನು. ಅದರಂತೆ ಪಾಂಡವರು 14 ವರ್ಷಗಳ ಕಾಲ ಈ ವ್ರತ ಆಚರಿಸಿ ಕೌರವರನ್ನು ಸೋಲಿಸಿ ತಮ್ಮ ರಾಜ್ಯಗಳನ್ನು ಮರಳಿ ಪಡೆದರೆಂಬ ಮಾಹಿತಿಗಳು ಪುರಾಣಗಳಲ್ಲಿ ಉಲ್ಲೇಖವಿದೆ.

ಹೀಗೆ ಹಲವರು ಅನಂತ ವ್ರತದ ಆಚರಣೆಯನ್ನು 14 ವರ್ಷಗಳ ಕಾಲ ಆಚರಿಸುವರು. ಇನ್ನು ಕೆಲವರು ತಮ್ಮ ತಮ್ಮ ಶಕ್ತಿಗನುಸಾರವಾಗಿ ಆಚರಿಸುವರು. ಏನೇ ಆದರೂ ನಿಷ್ಠೆಯಿಂದ, ಭಕ್ತಿಯಿಂದ, ನಿಷ್ಕಲ್ಮಶ ಭಾವದಿಂದ ಅನಂತ ವ್ರತವನ್ನು ಆಚರಿಸಿದವರಿಗೆ ವಿಷ್ಣು ದೇವನು ಆರೋಗ್ಯ, ಆಯಸ್ಸು, ಐಶ್ವರ್ಯ, ಆರೋಗ್ಯ ಇತ್ಯಾದಿಗಳನ್ನು ಕರುಣಿಸುತ್ತಾನೆ. ಅನೇಕ ಜನರು ಗಣೇಶ ಚತುರ್ಥಿ ದಿನದಂದು ಗಣಪತಿಯ ಆರಾಧನೆ ಮಾಡಿ ಚತುರ್ದಶಿ ದಿನವಾದ ಈ ದಿನದಂದು ವಿಸರ್ಜನೆ ಮಾಡುತ್ತಾರೆ.

ಅನಂತ ಚತುರ್ದಶಿ ವ್ರತಾಚರಣೆ ವಿಧಿ ವಿಧಾನಗಳು ಹೀಗಿವೆ: ಅನಂತ ಚತುರ್ದಶಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿ ಶುಚಿಯಾಗಿ ನಂತರ ಮನೆಯ ಮಹಿಳೆಯರು ಮನೆಯ ಅಂಗಳವನ್ನು ಗುಡಿಸಿ ರಂಗೋಲಿ ಹಾಕಬೇಕು. ಮನೆಯ ಮುಂದಿನ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿ ನಂತರ ಅನಂತ ದೇವರ ಮಂಟಪ ಕಟ್ಟಿರುವ ಸ್ಥಳದಲ್ಲಿ ಪೂಜಾ ರಂಗೋಲಿ ಹಾಕಿ ಆ ಜಾಗದಲ್ಲಿ ಮಣೆಯಿಟ್ಟು ಅದರ ಮೇಲೆ ತಟ್ಟೆಯಲ್ಲಿ ಗೋಧಿ ಹಾಕಿ ಅದರ ಮೇಲೆ ಎರಡು ಕಲಶವಿಡಬೇಕು. ಒಂದು ಅನಂತ ದೇವರ ಕಲಶವಾದರೆ ಮತ್ತೊಂದು ಯಮುನಾ ದೇವಿಯ ಕಲಶವಾಗಿರುತ್ತದೆ. ಮನೆಯ ಪ್ರವೇಶ ದ್ವಾರಕ್ಕೆ ಮತ್ತು ದೇವರ ಪೂಜಾ ಮಂಟಪಕ್ಕೆ ಬಾಳೆ ಕಂಬ ಮತ್ತು ಮಾವಿನ ತೋರಣ ಕಟ್ಟಬೇಕು. ನಂತರ ಮನೆಯ ಪಕ್ಕದ ಬಾವಿ ಅಥವಾ ಕೆರೆಯಿಂದ ಶುಚಿಯಾಗಿ ಮಣ್ಣಿನ ಅಥವಾ ತಾಮ್ರದ ಮಡಿಕೆಯಲ್ಲಿ ನೀರನ್ನು ತರುವುದು. (ಇಂತಹ ನೀರನ್ನು ಪುರಾಣಗಳಲ್ಲಿ ಯಮುನೆ ನೀರು ಎಂದು ಉಲ್ಲೇಖಿಸಲಾಗಿದೆ.) ನಂತರ ಆ ನೀರನ್ನು ಆ ಎರಡು ಕಲಶಗಳಿಗೆ ಹಾಕಿ ಅದರ ಮೇಲೆ ಹಾವಿನ ಹೆಡೆಯ ರೂಪದಲ್ಲಿರುವ ದರ್ಭೆಯೊಂದನ್ನು ರಚಿಸಿ ಅದರ ಮುಂದೆ ದೇವರ ಸಾಲಿಗ್ರಾಮಗಳನ್ನಿಟ್ಟು ಶೋಡಷೋಪಚಾರ ಪೂಜೆ ಮಾಡುವುದು. ನಂತರ ಈ 14 ದಿನದ ಅನಂತ ವ್ರತದ ಆಚರಣೆಗಾಗಿ 14 ಬಗೆಯ ವಿವಿಧ ಭಕ್ಷ್ಯಗಳನ್ನು (ಅನ್ನ, ಪಾಯಸ, ಕಡುಬು, ಮೋದಕ, ಚಕ್ಕುಲಿ, ಹಾಲು ಇತ್ಯಾದಿ) ದೇವರ ಮುಂದಿಟ್ಟು ಪೂಜಾ ಕಾರ್ಯ ನೆರವೇರಿಸಿ ಆ ನೈವೇದ್ಯವನ್ನು ದೇವರಿಗೆ ಅರ್ಪಿಸುವುದು.

ನಂತರ, ಅನಂತ ಪದ್ಮನಾಭನ ಕಥೆಯನ್ನು ಓದುವುದು ಮತ್ತು ಆ ಕಥೆಯನ್ನು ತದೇಕ ಚಿತ್ತದಿಂದ ಆಲಿಸುವುದು. ಕೊನೆಗೆ ಮನೆಯ ಎಲ್ಲಾ ಸದಸ್ಯರು ಜೊತೆಗೂಡಿ ಭಕ್ತಿಯಿಂದ ದೇವರಿಗೆ ಮಹಾ ಮಂಗಳಾರತಿ ಮಾಡುವುದು ಹಾಗೂ ತಮ್ಮ ಬೇಕುಬೇಡಿಕೆಗಳನ್ನು ನೆರವೇರಿಸಿಕೊಡಲು ಭಗವಂತನನ್ನು ಪ್ರಾರ್ಥಿಸುವುದು. ಬೆಳಗಿನಿಂದ ವ್ರತಾಚರಣೆಯಲಿದ್ದು ಅನಂತ ಪದ್ಮನಾಭ ದೇವರಿಗೆ ಪೂಜೆ ಸಲ್ಲಿಸಿ ನಂತರ ಎಲ್ಲರೂ ದೇವರಿಗೆ ಸಮರ್ಪಿಸಿದ ನೈವೇದ್ಯವನ್ನು ಪ್ರಸಾದದ ರೂಪದಲ್ಲಿ ಒಟ್ಟಿಗೆ ಕುಳಿತು ಭೋಜನ ಮಾಡುವುದು. ನಂತರ ಆ ದಿನ ಸಂಪೂರ್ಣ ರಾತ್ರಿ ಮಹಾವಿಷ್ಣು ದೇವರ ನಾಮಸ್ಮರಣೆ ಅಥವಾ ವಿಷ್ಣು ಸಹಸ್ರನಾಮ ಅಥವಾ ಮಹಾ ವಿಷ್ಣುವಿನ ವ್ರತಾಕಥೆಗಳನ್ನು ಓದುತ್ತಾ ಜಾಗರಣೆ ಮಾಡುತ್ತಾ ಮರುದಿನ ಸಂಧ್ಯಾವಂದನೆಯಾದ ನಂತರ ಆ ಕಳಶದ ನೀರನ್ನು ಎಲ್ಲಿಂದ ತರುತ್ತಾರೋ ಅದೇ ಜಾಗಕ್ಕೆ ಅಂದರೆ ಬಾವಿ ಅಥವಾ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜಿಸುವುದರ ಮೂಲಕ ಅನಂತ ವ್ರತದ ಪೂಜೆ ಸಂಪೂರ್ಣವಾಗುತ್ತದೆ. ಈ ವ್ರತವನ್ನು ಆಚರಿಸುವವರ ಮನೆ ಅಥವಾ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಈ ಪೂಜೆಯನ್ನು ಯಾರೇ ನೋಡಿದರೂ ಅಥವಾ ಯಾರೇ ಕೇಳಿದರೂ ಅವರ ಇಷ್ಟಾರ್ಥಗಳು ಫಲಿಸುತ್ತದೆ ಎಂಬ ನಂಬಿಕೆ ಇದೆ.

ದೇಶದ ಬಹುತೇಕ ಬ್ರಾಹ್ಮಣರ ಕುಟುಂಬಗಳು ಈ ಅನಂತ ಪದ್ಮನಾಭ ವ್ರತಾಚರಣೆಯನ್ನು ಅತ್ಯಂತ ಬುದ್ಧಿವಂತಿಕೆ, ಪ್ರಜ್ಞಾವಂತಿಕೆ, ಸಂಗೀತ ಕಾರ್ಯಕ್ರಮ, ನಾಟ್ಯದ ಮೂಲಕ, ಆಗಮ ಮತ್ತು ಆಚಾರ ವಿಚಾರಗಳಿಂದ ಆಚರಿಸಲ್ಪಡುತ್ತಾರೆ. ಇಂತಹ ಮಡಿವಂತಿಕೆಯ ವ್ರತಾಚರಣೆಗಳಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಪ್ರಸಿದ್ಧಿಯಾಗಿದೆ. ಅತಿಥಿ ಸತ್ಕಾರಕ್ಕೆ ಅತ್ಯಂತ ಹೆಸರುವಾಸಿಯಾಗಿರುವ ಈ ಜಿಲ್ಲೆಗಳ ಜನರು ತಮ್ಮ ತಮ್ಮ ಸಂಬಂಧಿಕರನ್ನು ಮನೆಗೆ ಕರೆಯಿಸಿ ಶ್ರದ್ಧಾ ಭಕ್ತಿಯಿಂದ ನಿಷ್ಠೆಯಿಂದ ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ. ಅದೇ ರೀತಿ ಈ ಹಿಂದಿನಿಂದಲೂ ಅಲ್ಲಿನ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜಾ ಕಾರ್ಯ ನಡೆಯುತ್ತಿದೆ.

ಪೂಜೆಯಾದ ನಂತರ, ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ದೇವಸ್ಥಾನ ಮತ್ತು ಅದರ ಪಕ್ಕದಲ್ಲೇ ಇರುವ ಛತ್ರದಲ್ಲಿ ಸಾಮೂಹಿಕ ಭೂರಿ ಭೋಜನವನ್ನು ಏರ್ಪಡಿಸುತ್ತಾರೆ. ಮತ್ತೊಂದು ವಿಶೇಷವೇನೆಂದರೆ, ಇಂತಹ ಭೋಜನ ಸಮಯದಲ್ಲಿ ಬಹುತೇಕ ನಳ ಮಹಾರಾಜರು ಅಂದರೆ ಆ ಊರಿನ ಗಂಡಸರೇ ಸೇರಿಕೊಂಡು ಸಂತರ್ಪಣೆ ಅಡುಗೆಯನ್ನು ಸಿದ್ಧ ಪಡಿಸುತ್ತಾರೆ ಮತ್ತು ಅವರೇ ಸೇರಿಕೊಂಡು ಬಂದ ಎಲ್ಲಾ ಭಕ್ತಾದಿಗಳಿಗೆ ಊಟ ಬಡಿಸುತ್ತಾರೆ.

ಈ ರೀತಿಯಾಗಿ ಅನಂತ ಪದ್ಮನಾಭ ವ್ರತಾಚರಣೆಯು ಕೇವಲ ಹಬ್ಬ ಹರಿದಿನವೆಂದಾಗದೇ ಒಂದು ರೀತಿಯ ಬಂಧುತ್ವ, ಸ್ನೇಹ ಸಂಗಮ ಏರ್ಪಾಡುಗತ್ತದೆ. ಇದೇ ರೀತಿಯ ಹಬ್ಬ-ಹರಿದಿನಗಳು ದೇಶದಲ್ಲಿ ಹೊಸಕಳೆಯನ್ನು ಹೊರ ಹಾಕುವುದು ಮಾತ್ರವಲ್ಲ ಧಾರ್ಮಿಕವಾಗಿ ದೇಶ ಬಲಾಢ್ಯವಾಗಿ ಬೆಳೆಯಲು ನೆರವಾಗುತ್ತದೆ. ಹಾಗಾಗಿ ಅನಂತ ಪದ್ಮನಾಭ ವ್ರತಾಚರಣೆಯನ್ನು ಮಾಡಲು ಇಚ್ಛಿಸುವವರು ಇದರ ಬಗ್ಗೆ ಸಂಪೂರ್ಣವಾಗಿ ಅರಿತಿರುವ ಜ್ಞಾನಿಗಳ ಅಥವಾ ಪುರೋಹಿತ ವರ್ಗದವರ ಸಲಹೆ ಸೂಚನೆಗಳನ್ನು ಅನುಸರಿಸಿ ಮಾಡುವುದು ಸೂಕ್ತವೆನಿಸುತ್ತದೆ.

ಲೇಖಕರು: ಯೋಗೀಶ್ ಶಬರಾಯ, ಪಾಲಿಬೆಟ್ಟ, ವಿರಾಜಪೇಟೆ ತಾಲೂಕು,ಕೊಡಗು ಜಿಲ್ಲೆ.