ನಾನೇನು ತಪ್ಪು ಮಾಡಿದೆ ಎಂದು ಕರ್ಣ ಕೇಳಿದಾಗ ಶ್ರೀ ಕೃಷ್ಣನು ಉತ್ತರ ನೀಡುವ ಪರಿಯಲ್ಲಿ ನಮಗೆಲ್ಲರಿಗೂ ಜೀವನಪಾಠ ನೀಡಿದ್ದು ಹೇಗೆ ಗೊತ್ತಾ??

ನಾನೇನು ತಪ್ಪು ಮಾಡಿದೆ ಎಂದು ಕರ್ಣ ಕೇಳಿದಾಗ ಶ್ರೀ ಕೃಷ್ಣನು ಉತ್ತರ ನೀಡುವ ಪರಿಯಲ್ಲಿ ನಮಗೆಲ್ಲರಿಗೂ ಜೀವನಪಾಠ ನೀಡಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಮಹಾ ಭಾರತವು ತನ್ನ ಪ್ರತಿಯೊಂದು ಘಟನೆಯಲ್ಲಿಯೂ ನಮ್ಮೆಲ್ಲರ ಜೀವನಕ್ಕೆ ಒಂದೊಂದು ನೀತಿ ಪಾಠಗಳನ್ನು ಹೇಳಿ ಕೊಡುತ್ತದೆ. ನಾವು ಮಹಾ ಭಾರತವನ್ನು ತಿಳಿದು ಕೊಂಡರೇ ಸಾಕಾಗುವುದಿಲ್ಲ, ಪ್ರತಿಯೊಂದು ಘಟನೆಗಳ ಹಿಂದಿರುವ ನೀತಿ ಪಾಠವನ್ನು ಕಲಿತು ಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ಖಂಡಿತ ನಮ್ಮ ಜೀವನ ಧರ್ಮದ ಹಾದಿಯಲ್ಲಿ ನಡೆದು ಯಶಸ್ಸನ್ನು ಕಾಣ ಬಹುದಾಗಿದೆ. ಇಂದು ನಾವು ಕೃಷ್ಣ ಹಾಗೂ ಕರ್ಣನ ನಡುವೆ ನಡೆದ ಒಂದು ಮಹತ್ವದ ಸಂಭಾಷಣೆಯ ಬಗ್ಗೆ ತಿಳಿದು ಕೊಂಡು ಜೊತೆಗೆ ಅದರ ಹಿಂದಿರುವ ಜೀವನ ಪಾಠವನ್ನು ಕೂಡ ತಿಳಿದು ಕೊಳ್ಳೋಣ.

ಒಮ್ಮೆ ಕರ್ಣನು ಶ್ರೀ ಕೃಷ್ಣನನ್ನು ಕೇಳುತ್ತಾನೆ, ನಾನು ಹುಟ್ಟಿದಾಗ ನನ್ನ ತಾಯಿ ನನ್ನನ್ನು ಬಿಟ್ಟು ಹೋದರು, ನಾನು ಕ್ಷತ್ರಿಯ ಅಲ್ಲ ಎಂಬ ಕಾರಣಕ್ಕೆ ದ್ರೋಣಾಚಾರ್ಯರು ನನಗೆ ವಿದ್ಯೆಯನ್ನು ಹೇಳಿ ಕೊಡಲಿಲ್ಲ. ಪರಶುರಾಮರು ನನಗೆ ವಿದ್ಯೆ ಕಲಿಸಿದರೂ ಕೂಡ ನನಗೆ ನನ್ನ ಶಿಕ್ಷಣ ಹೆಚ್ಚು ಅಗತ್ಯವಿರುವ ಸಂದರ್ಭದಲ್ಲಿ ನಾನು ಅದನ್ನು ಮರೆತು ಬಿಡುತ್ತೇನೆ ಎಂದು ಶಾಪ ನೀಡಿದರು. ಯಾಕೆಂದರೆ ಅವರ ಪ್ರಕಾರ ನಾನು ಕ್ಷತ್ರಿಯನಲ್ಲ. ಅಷ್ಟೇ ಯಾಕೆ ದ್ರೌಪದಿ ಸ್ವಯಂವರದಲ್ಲಿ ನನ್ನನ್ನು ಅವಮಾನಿಸಲಾಯಿತು, ನನ್ನ ತಾಯಿ ಕುಂತಿ ಅಂತಿಮವಾಗಿ ತನ್ನ ಇತರ ಗಂಡು ಮಕ್ಕಳನ್ನು ಉಳಿಸಿಕೊಳ್ಳಲು ನನ್ನ ಜನ್ಮ ರಹಸ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟರು. ನಾನು ಇಂದು ಏನನ್ನೆಲ್ಲಾ ಪಡೆದು ಕೊಂಡಿರುವನೋ ಅವೆಲ್ಲವನ್ನು ನನಗೆ ದುರ್ಯೋಧನರು ನೀಡಿದ್ದಾರೆ.

ಆದ ಕಾರಣ ನಾನು ಅವರ ಪರವಾಗಿ ಯುದ್ಧದಲ್ಲಿ ಭಾಗವಹಿಸಿದರೇ ತಪ್ಪೇನು? ಇಲ್ಲಿ ನನ್ನ ತಪ್ಪು ಏನೆಂದು ನನಗೆ ಅರ್ಥವಾಗುತ್ತಿಲ್ಲ. ನನಗೆ ಇಷ್ಟೆಲ್ಲಾ ಕಷ್ಟಗಳು ಯಾಕೆ ಎಂದು ಕೃಷ್ಣನನ್ನು ಪ್ರಶ್ನೆ ಮಾಡುತ್ತಾನೆ. ಶ್ರೀ ಕೃಷ್ಣನ ಉತ್ತರ ನೀಡಿದ ರೀತಿ ಖಂಡಿತ ನಮಗೆಲ್ಲರಿಗೂ ಒಂದು ಜೀವನ ಪಾಠವಾಗಲಿದೆ. ಉತ್ತರ ನೀಡಲು ಆರಂಭಿಸಿದ ಕೃಷ್ಣ ಓ ಕರ್ಣನೇ ನನ್ನ ಜನ್ಮಸ್ಥಳ ಯಾವುದು ಎಂದು ನಿನಗೆ ತಿಳಿದಿದೆ. ನಾನು ಹುಟ್ಟಿದ್ದು ಜೈಲಿನಲ್ಲಿ. ನಾನು ಹುಟ್ಟುವ ಮುನ್ನವೇ ನನ್ನನ್ನು ಮುಗಿಸಲು ಸಾ-ವು ಕಾದು ಕುಳಿತಿತ್ತು. ಹುಟ್ಟಿದ ರಾತ್ರಿಯೇ ನಾನು ನನ್ನ ತಂದೆ ತಾಯಿ ಯಿಂದ ದೂರವಾದೆ. ನೀನು ನಿನ್ನ ಬಾಲ್ಯದ ಜೀವನದಲ್ಲಿ ರಥ, ಕುದುರೆ, ಬಿಲ್ಲು ಮತ್ತು ಬಾಣಗಳ ನಡುವೆ ಬೆಳೆದೆ. ನಿನ್ನ ಸುತ್ತ ಮುತ್ತ ಕ್ಷತ್ರಿಯರಿದ್ದರು, ನಾನು ಬೆಳೆದಿದ್ದು ಹಸುವಿನ ಜೊತೆ ಗೋಕುಲದಲ್ಲಿ. ಅಷ್ಟೇ ಯಾಕೆ ನಾನು ಅಲ್ಲಿ ಇದ್ದರೂ ಕೂಡ ನನ್ನನ್ನು ಅಂತ್ಯಗೊಳಿಸಲು ಎಷ್ಟು ರಾಕ್ಷಸರು ಬಂದರು ಎಂಬುದು ನಿನಗೂ ಕೂಡ ತಿಳಿದೇ ಇದೆ.

ಸೈನ್ಯವಿಲ್ಲ, ಯಾವುದೇ ರೀತಿಯ ಶಿಕ್ಷಣವಿಲ್ಲ. ಆದರೂ ಕೂಡ ಎಲ್ಲರ ಸಮಸ್ಯೆಗೆ ನಾನೇ ಕಾರಣ ಎಂದು ಜನರು ಹೇಳಿದರು, ದೂಷಿಸಿದರು . ನೀನು ನಿನ್ನ ಶೌರ್ಯದ ಮೂಲಕ ಗುರುಗಳ ಮುಂದೆ ಶಕ್ತಿ ಪ್ರದರ್ಶನ ಮಾಡಿ ಗುರುಗಳ ಮೆಚ್ಚುಗೆಗೆ ಪಾತ್ರವಾಗುತ್ತಿದ್ದ ಸಂದರ್ಭದಲ್ಲಿ ನನಗೆ ಯಾವುದೇ ಶಿಕ್ಷಣ ದೊರೆಯಲಿಲ್ಲ. ನಾನು 16ನೇ ವಯಸ್ಸಿನಲ್ಲಿದ್ದಾಗ ಋಷಿ ಸಂದೀಪ ರ ಗುರು ಕುಲವನ್ನು ತಲುಪಿದೆ. ನೀನು ಆಯ್ಕೆ ಮಾಡಿಕೊಂಡ ಹುಡುಗಿಯನ್ನು ಮದುವೆಯಾಗಬಹುದು, ಆದರೆ ನಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವಂತಿರಲಿಲ್ಲ.

ಅಷ್ಟೇ ಯಾಕೆ ನನ್ನ ಇಡೀ ಯಾದವ ಸಮುದಾಯವನ್ನು ಜರಾಸಂದ ನಿಂದ ರಕ್ಷಿಸಲು ನಾನು ನನ್ನ ಇಡೀ ಸಮುದಾಯವನ್ನು ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲರನ್ನೂ ದ್ವಾರಕ ನಗರಕ್ಕೆ ಕರೆದು ಕೊಂಡು ಹೋದೆ. ಈಗಲೂ ಕೂಡ ಮಹಾ ಭಾರತದ ಯುದ್ಧದಲ್ಲಿ ನೀನು ದುರ್ಯೋಧನನ ಪರವಾಗಿ ಯುದ್ಧ ಮಾಡಿ ಜಯ ಗಳಿಸಿದರೇ ನಿನಗೆ ಸಾಕಷ್ಟು ಮನ್ನಣೆ ಸಿಗುತ್ತದೆ. ಆದರೆ ಧರ್ಮರಾಜ ಗೆದ್ದರೇ ನನಗೆ ಏನು ಸಿಗುತ್ತದೆ?? ಯಾವುದೇ ಪ್ರತಿಫಲ ಸಿಗುವುದಿಲ್ಲ. ಬದಲಾಗಿ ಯುದ್ಧದಿಂದ ಉಂಟಾಗುವ ಸಮಸ್ಯೆಗಳಿಗೆ ಶ್ರೀ ಕೃಷ್ಣನೇ ಕಾರಣ ಎಂದು ನನ್ನನ್ನು ದೂಷಿಸುತ್ತಾರೆ.

ಆದ್ದರಿಂದ ಒಂದು ವಿಷಯವನ್ನು ನಿನ್ನ ನೆನಪಿನಲ್ಲಿ ಇಟ್ಟಿಕೊ ಕರ್ಣ, ಪ್ರತಿಯೊಬ್ಬರಿಗೂ ತನ್ನ ಜೀವನವು ಸವಾಲನ್ನು ನೀಡುತ್ತದೆ. ಜೀವನವು ಯಾರಿಗೂ ನ್ಯಾಯ ನೀಡುವುದಿಲ್ಲ. ದುರ್ಯೋಧನ ಹಾಗೂ ಯುದಿಷ್ಟರ ಇಬ್ಬರಿಗೂ ಅನ್ಯಾಯ ಆಗಿದೆ. ಆದರೆ ನಿಜವಾದ ಧರ್ಮ ಯಾವುದು ಎಂದು ಎಲ್ಲರಿಗೂ ತಿಳಿದಿದೆ. ಪ್ರತಿಯೊಬ್ಬರ ಜೀವನದಲ್ಲೂ ನ್ಯಾಯ ಅನ್ಯಾಯಗಳ ಕಾಣಿಸುತ್ತದೆ. ಆದರೆ ಆ ಸಮಯದಲ್ಲಿ ನೀವು ಆ ಬಿಕ್ಕಟ್ಟನ್ನು ಹೇಗೆ ಎದುರಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ನಿಮಗೆ ನ್ಯಾಯ ಸಿಕ್ಕಿಲ್ಲ ಎಂದು ನೀವು ಅನ್ಯಾಯದ ಹಾದಿಯಲ್ಲಿ ನಡೆಯುವುದು ಸರಿಯಲ್ಲ. ನ್ಯಾಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ನೀವು ಅನ್ಯಾಯದ ಹಾದಿಯಲ್ಲಿ ನಡೆಯಲು ದೇವರು ಅನುಮತಿ ನೀಡಿದ್ದಾನೆ ಎಂಬುದು ಇದರ ಅರ್ಥವಲ್ಲ ಎಂದನು.

ಈ ಸಂಭಾಷಣೆಯ ಮೂಲಕ ಮಹಾನ್ ಶ್ರೀ ಕೃಷ್ಣನು ಪ್ರತಿಯೊಬ್ಬರಿಗೂ ಜೀವನದಲ್ಲಿ ತಮ್ಮದೇ ಆದ ರೀತಿಯ ಸವಾಲುಗಳು ಎದುರಾಗುತ್ತವೆ. ಪ್ರತಿಯೊಂದು ಸಂದರ್ಭದಲ್ಲಿಯೂ ನಾವು ನಮ್ಮಲ್ಲಿನ ಸವಾಲುಗಳನ್ನು ಎದುರಿಸುವ ರೀತಿ ಹಾಗೂ ಧರ್ಮದ ಹಾದಿಯಲ್ಲಿ ನಡೆಯುತ್ತಾ ಹೋದರೆ ಖಂಡಿತ ಮುಂದೊಂದು ದಿನ ನಮಗೆ ಯಶಸ್ಸು ಸಿಗುತ್ತದೆ. ಧರ್ಮದ ಮುಂದೆ ಅಧರ್ಮ ಎಂದಿಗೂ ನಿಲ್ಲುವುದಿಲ್ಲ, ನಿನ್ನ ಜೀವನದಲ್ಲಿ ಯಾವುದೋ ಸವಾಲುಗಳು ಎದುರಾಗುತ್ತಿವೆ ಎಂದ ತಕ್ಷಣ ನೀನು ಅಧರ್ಮದ ಹಾದಿಯಲ್ಲಿ ನಡೆಯುವುದು ತಪ್ಪಾಗುತ್ತದೆ. ಅಂತಹ ಕಠಿಣ ಸಂದರ್ಭದಲ್ಲಿಯೂ ಕೂಡ ನೀನು ಧರ್ಮದ ಹಾದಿಯಲ್ಲಿ ನಡೆದರೆ ಕಂಡಿತ ನಿನಗೆ ಮುಂದೊಂದು ದಿನ ಯಶಸ್ಸು ಸಿಗುತ್ತದೆ ಎಂಬ ಮಹಾನ್ ಜೀವನ ಪಾಠವನ್ನು ನಮಗೆಲ್ಲರಿಗೂ ನೀಡಿದ್ದಾನೆ.