ಅಮೇರಿಕದಲ್ಲಿ ರಾರಾಜಿಸಲಿದ್ದಾರೆ ರಾಮ ! ಭಗವಾನ್ ಶ್ರೀ ರಾಮನಿಗೆ ಅಮೇರಿಕದಲ್ಲಿ ಸಲ್ಲಿಸುತ್ತಿರುವ ವಿಶೇಷ ಗೌರವ ಹೇಗಿರಲಿದೆ ಗೊತ್ತಾ?

ಅಮೇರಿಕದಲ್ಲಿ ರಾರಾಜಿಸಲಿದ್ದಾರೆ ರಾಮ ! ಭಗವಾನ್ ಶ್ರೀ ರಾಮನಿಗೆ ಅಮೇರಿಕದಲ್ಲಿ ಸಲ್ಲಿಸುತ್ತಿರುವ ವಿಶೇಷ ಗೌರವ ಹೇಗಿರಲಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಹಲವಾರು ದಶಕಗಳ ಕನಸಾದ ಪುಣ್ಯ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಸಕಲ ಸಿದ್ಧತೆಗಳೊಂದಿಗೆ ಅಯೋಧ್ಯೆ ಸಿಂಗಾರಗೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೇ ಇನ್ನು ಕೆಲವು ವರ್ಷಗಳಲ್ಲಿ ಸಂಪೂರ್ಣ ರಾಮ ಮಂದಿರ ನಿರ್ಮಾಣವಾಗಿ ಕೋಟ್ಯಾಂತರ ಭಕ್ತರು ಅಯೋಧ್ಯೆಗೆ ಶ್ರೀರಾಮನ ದರ್ಶನ ಪಡೆದು ತಮ್ಮ ಜನ್ಮವನ್ನು ಪಾವನ ಮಾಡಿ ಕೊಳ್ಳಲಿದ್ದಾರೆ. ಆಗಸ್ಟ್ ತಿಂಗಳ 5 ನೇ ತಾರೀಖಿನಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು ಎಲ್ಲರೂ ಈ ಕ್ಷಣಕ್ಕಾಗಿ ಕಾದು ಕುಳಿತಿದ್ದಾರೆ.

ಈ ರೀತಿಯ ಅದ್ಭುತ ಕ್ಷಣಗಳನ್ನು ಆಚರಿಸಲು ಭಾರತೀಯರು ಕಾದು ಕುಳಿತಿರುವ ಸಂದರ್ಭದಲ್ಲಿ, ಅಮೇರಿಕಾ ದೇಶದಲ್ಲಿಯೂ ಕೂಡ ದಾಖಲೆಯ ರೀತಿಯಲ್ಲಿ ಶ್ರೀರಾಮನು ರಾರಾಜಿಸಲು ಸಿದ್ಧವಾಗಿದ್ದಾನೆ. ಹೌದು ಸ್ನೇಹಿತರೇ, ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದು ಕೊಂಡಿರುವ ಅಮೆರಿಕ ದೇಶದಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಂದು ಶ್ರೀರಾಮನಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಸಿದ್ಧತೆ ನಡೆದಿವೆ. ಅಮೇರಿಕಾ ದೇಶದ ಪ್ರತಿಷ್ಠಿತ ನ್ಯೂಯಾರ್ಕ್ ನಗರದಲ್ಲಿರುವ ಟೈಮ್ ಸ್ಕ್ವೇರ್ ಪ್ರದೇಶದಲ್ಲಿ ಭಗವಾನ್ ಶ್ರೀ ರಾಮನ 3 ಡಿ ಭಾವಚಿತ್ರಗಳು ಅತಿ ದೊಡ್ಡ ಎಲ್ಇಡಿ ಪರದೆಗಳಲ್ಲಿ ರಾರಾಜಿಸಲಿವೆ.

ಆಗಸ್ಟ್ 5ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಜೈ ಶ್ರೀ ರಾಮ್ ಎಂಬ ಪದಗಳು ಕೇಳಿ ಬರಲಿದ್ದು, ಭಗವಾನ್ ಶ್ರೀ ರಾಮನ ಭಾವಚಿತ್ರಗಳು, ವಿಡಿಯೋಗಳು ವಾಸ್ತುಶಿಲ್ಪದ ಭಾವಚಿತ್ರಗಳು, ಹಾಗೂ ಶಿಲಾನ್ಯಾಸ ಕಾರ್ಯಕ್ರಮದ ಚಿತ್ರಗಳು ಫಲಕಗಳಲ್ಲಿ ರಾರಾಜಿಸಲಿದೆ. ವಿಶೇಷವೇನೆಂದರೆ ಶ್ರೀರಾಮನ ಭಾವಚಿತ್ರ ಪ್ರಕಟಣೆ ಮಾಡಲು ಗುತ್ತಿಗೆ ಪಡೆಯುತ್ತಿರುವ ಪರದೆಯ ಅಳತೆ ಬರೋಬ್ಬರಿ 17 ಸಾವಿರ ಚದರ ಅಡಿ ಇರಲಿದೆ ಎಂಬುದು ತಿಳಿದು ಬಂದಿದೆ. ಈ ಘಟನೆ ವಿಶ್ವದಲ್ಲಿಯೇ ಅತಿ ದೊಡ್ಡ ನಿರಂತರ ಬಾಹ್ಯ ಪ್ರದರ್ಶನಗಳಲ್ಲಿ ಹಾಗೂ ಹೊರಾಂಗಣದಲ್ಲಿ ನಡೆಯುವ ಅತಿ ಹೆಚ್ಚು ರೆಸೊಲ್ಯೂಷನ್ ಪಡೆದು ಕೊಂಡಿರುವ ಪ್ರದರ್ಶನವಾಗಲಿದ್ದು ಹೊಸದೊಂದು ವಿಶ್ವ ದಾಖಲೆ ಬರೆಯಲಿದೆ.