ಛೇ ಬಂದ್ರು, ಸ್ವಲ್ಪ ದುಡ್ಡು ಕೊಟ್ಟು ಕಳ್ಸೋಣ ಎನ್ನುವ ಮನೋಭಾವನೆಯನ್ನು ಬದಲಾಯಿಸುವ ಮಂಗಳ !

ಛೇ ಬಂದ್ರು, ಸ್ವಲ್ಪ ದುಡ್ಡು ಕೊಟ್ಟು ಕಳ್ಸೋಣ ಎನ್ನುವ ಮನೋಭಾವನೆಯನ್ನು ಬದಲಾಯಿಸುವ ಮಂಗಳ !

“ಛೇ ಬಂದ್ರಪ್ಪ ಸ್ವಲ್ಪ ದುಡ್ಡು ಕೊಟ್ಟು ಕಳ್ಸೋಣ ಮೊದ್ಲು”, “ಬಂದ್ರಾ ತಗೋಳಿ ನಾಣ್ಯ ಕೊಡಿ ವಾಪಾಸ್ ಅದೇನ್ ಒಳ್ಳೇದಾಗುತ್ತೋ ನೋಡೋಣ”, “ಇವರೆಲ್ಲ ಯಾಕ್ ಕೆಲಸ ಮಾಡಲ್ಲ? ಭಿಕ್ಷೆ ಬೇಡುದ್ರೆನೇ ದುಡ್ಡು ಜಾಸ್ತಿ ಬರುತ್ತೆ ಅಂತ ಇರ್ಬೇಕು”. “ಪಾಪ ಅಲ್ವ ಇವ್ರು ಕೆಲಸ ಮಾಡೋಣ ಅಂದ್ರು ಯಾರು ಕೆಲಸ ಕೊಡಲ್ಲ”, “ಹೇ ದುಡ್ಡು ಇಲ್ಲ ಏನ್ ಇಲ್ಲ ಹೋಗ್ ಹೋಗು”,”ಇವರು ಒರಿಜಿನಲ್ ಅಲ್ಲ, ಗಂಡಸರು ಹಣಕ್ಕೆ ಹೀಗೆ ಡ್ರೆಸ್ ಮಾಡ್ಕೊಂಡು ಬರ್ತಾರೆ” ಇದು ನಮ್ಮ ಸಮಾಜ ಮಂಗಳ ಮುಖಿಯರನ್ನು ನೋಡುವ ರೀತಿ. ಈ ಸುದ್ದಿ ಈಗ ಯಾಕೆ ಎಂದು ಆಲೋಚನೆ ಮಾಡುತ್ತಿದ್ದೀರಾ? ಈ ಲೇಖನ ಸಂಪೂಣ ಓದಿ ನಿಮಗೆ ತಿಳಿಯುತ್ತದೆ.

ನಮಸ್ಕಾರ ಸ್ನೇಹಿತರೇ, ನೀವು ಸಹ ಎಲ್ಲಾದರೂ ಮಂಗಳಮುಖಿಯರನ್ನು ಕಂಡರೇ ಮೇಲಿನ ಲಿಸ್ಟ್ ನಲ್ಲಿರುವ ಯಾವುದಾದರೂ ಒಂದು ಪ್ರತಿಕ್ರಿಯೆ ನೀಡುತ್ತೀರಾ. ಇದೇ ಪರಿಕಲ್ಪನೆಯನ್ನು ಹೋಗಲಾಡಿಸಲು, ಮಂಗಳಮುಖಿಯರ ಜೀವನವನ್ನು ಪ್ರೇಕ್ಷಕರ ಮುಂದೆ ತೆರೆದಿಡಲು ಥ್ರಿಲ್ಲರ್ ವೆಬ್ ಸೀರೀಸ್ ನ ಮೂಲಕ ನಿಮ್ಮ ಮುಂದೆ ಬರುತ್ತಿದೆ ಮಂಗಳ ಚಿತ್ರ ತಂಡ.

ಹೌದು ಸ್ನೇಹಿತರೇ, ಯುವ ನಿರ್ದೇಶಕ ಪೃಥ್ವಿ ಕುಣಿಗಲ್ ರವರು ಮನರಂಜನೆಯ ಸಮೇತ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಲು ತಮ್ಮ ಜೀವನದ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದ ಮಂಗಳ ಮುಖಿಯೊಬ್ಬರ ಬಳಿ ತೆರಳಿ ಮಂಗಳಮುಖಿಯರ ಜೀವನದ ಬಗ್ಗೆ, ಎದುರಿಸುತ್ತಿರುವ ಸವಾಲುಗಳ ಬಗ್ಗೆ ಹಾಗೂ ಸಮಾಜ ಅವರನ್ನು ಕಾಣುವ ರೀತಿಯ ಬಗ್ಗೆ ಒಂದು ಕಥೆ ಹೆಣೆದು ಪ್ರೇಕ್ಷಕರ ಮುಂದೆ ವೆಬ್ ಸೀರೀಸ್ ನ ಮೂಲಕ ತೆರೆದಿಡಲು ಮುಂದಾಗಿದ್ದಾರೆ. ಈ ಕಥೆಯ ಹಿಂದಿರುವ ಉದ್ದೇಶ, ಮಂಗಳಮುಖಿಯರ ಬಗ್ಗೆಯೇ ಯಾಕೆ ವೆಬ್ ಸೀರೀಸ್ ಮಾಡಲು ನಿರ್ಧಾರ ಮಾಡಲಾಯಿತು, ಯಾರೆಲ್ಲ ನಟನೆ ಮಾಡಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಬೇಕೇ? ಸಂಪೂಣ ಓದಿ ನಿಮಗೆ ತಿಳಿಯುತ್ತದೆ.

ಈ ವೆಬ್ ಸಿರೀಸ್ ನ ಯುವ ನಿರ್ದೇಶಕ ಪೃಥ್ವಿ ಕುಣಿಗಲ್ ರವರ ಬಾಲ್ಯದ ಜೀವನ ಅಷ್ಟು ಸುಲಭವಾಗಿರಲಿಲ್ಲ, ಮನೆಯ ಆರ್ಥಿಕ ಪರಿಸ್ಥಿತಿಯಿಂದ ಓದುವುದು ಕೂಡ ಕೊಂಚ ಕಷ್ಟವೇ ಆಗಿತ್ತು, ಆದರೆ ಈ ಯುವ ನಿರ್ದೇಶಕರಿಗೆ ಸಹಾಯ ಹಸ್ತ ಚಾಚಿದ್ದು ಮತ್ತ್ಯಾರು ಅಲ್ಲ ಅವರೊಬ್ಬರು ಮಂಗಳಮುಖಿ. ಪೃಥ್ವಿ ರವರನ್ನು ಕಂಡ ಕೂಡಲೇ ಪ್ರತಿ ಬಾರಿಯೂ 100 ರೂಪಾಯಿ ಕೈಗಿಟ್ಟು ತೆರಳುತ್ತಿದ್ದರು. ನನಗೆ ಯಾಕೆ ದುಡ್ಡು ಕೊಡುತ್ತಾರೆ ಎಂಬುದರ ಅರಿವು ಇಲ್ಲದೇ ಆ ಮಂಗಳಮುಖಿಯೊಬ್ಬರು ನೀಡುತ್ತಿದ್ದ ದುಡ್ಡನ್ನು ಪುಸ್ತಕಗಳನ್ನು ಖರೀದಿಸಲು ಹಾಗೂ ಶಿಕ್ಷಣದ ಇತರ ಖರ್ಚುಗಳನ್ನು ನಿಭಾಯಿಸಲು ಬಳಸುತ್ತಿದ್ದರು.

ಇಂದು ಅದೇ ಪೃಥ್ವಿ ಕುಣಿಗಲ್ ರವರು ಹಲವಾರು ವಿವಿಧ ಕಥೆಗಳನ್ನು ಹೆಣೆದ ಮೇಲೆ, ನನಗೆ ಸಹಾಯ ಮಾಡಿದ್ದ ಮಂಗಳಮುಖಿಯರನ್ನು ಸಮಾಜ ನೋಡುವ ದೃಷ್ಟಿ ಬದಲಾಗಬೇಕು ಎಂಬ ಮಹತ್ವಾಕಾಂಕ್ಷೆ ಯಿಂದ ಈ ಕಥೆ ರಚಿಸಿದ್ದಾರೆ. ಇನ್ನು ಕಥೆಯ ಕುರಿತು ನಿರ್ದೇಶಕರು ಮಾತನಾಡುವಾಗ, ಕಥೆ ಕೇಳಿದ ಕೂಡಲೇ ನಟನೆ ಮಾಡಲು ಒಪ್ಪಿಕೊಳ್ಳುವುದಷ್ಟೇ ಅಲ್ಲದೇ ವಿವಿಧ ರೀತಿಯಲ್ಲಿ ತಂಡಕ್ಕೆ ಬೆಂಬಲವಾಗಿ ನಿಂತು ನಟಿ ಕಾವ್ಯ ಶಾಸ್ತ್ರಿ ರವರು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಾವ್ಯ ಶಾಸ್ತ್ರಿ ಅವರನ್ನು ಹೊರತು ಪಡಿಸಿದಂತೆ ಖ್ಯಾತ ಕಲಾವಿದರಾದ ಮಂಜು ಪಾವಗಡ, ಅಂಕಿತ, ರಾಘವೇಂದ್ರ ರವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದಿಲ್ ನಡಾಫ್ ಸಂಗೀತ ಸಂಯೋಜನೆ ಮಾಡಿದ್ದು, ಮಹೇಶ್ ರವರು ಎಡಿಟಿಂಗ್ ಮಾಡುತ್ತಿದ್ದಾರೆ.

ಇನ್ನುಳಿದಂತೆ ಖ್ಯಾತ ಛಾಯಾಗ್ರಾಹಕರಾದ ಆನಂದ್ ಸುಂದರೇಶ ರವರು ಛಾಯಾಗ್ರಹಣ ಮಾಡುತ್ತಿದ್ದು, ಹರ್ಷ ಅವರು ಪೋಸ್ಟರ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರತಾಪ್, ಧನುಷ್, ಯೋಗಾನಂದ್, ನವರಾಜ್, ರಾಜೇಶ್, ಅಭಿಷೇಕ್, ಮನು ರವರು ಸೇರಿ ನಿರ್ದೇಶನದ ತಂಡದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ತಾಂತ್ರಿಕವಾಗಿ ಮಂಗಳ ತಂಡ ಬಲಿಷ್ಠವಾಗಿದ್ದು ಮೊದಲ ಪೋಸ್ಟರ್ ನಲ್ಲಿಯೇ ಬಾರಿ ಸದ್ದು ಮಾಡಿದೆ. ಹೌದು ಕಳೆದ ಕಾರ್ಮಿಕರ ದಿನಾಚರಣೆಯಂದು ಬಿಡುಗಡೆಯಾದ ವೆಬ್ ಸೀರೀಸ್ ನ ಫಸ್ಟ್ ಲುಕ್ ಮೊದಲ ಹೆಜ್ಜೆಯಲ್ಲಿಯೇ ಬಾರಿ ಸದ್ದು ಮಾಡಿದೆ. ಇತ್ತೀಗಷ್ಟೇ ಕನ್ನಡದಲ್ಲಿ ವೆಬ್ ಸೀರೀಸ್ ಟ್ರೆಂಡ್ ಆರಂಭವಾಗಿದ್ದು, ಏಳು ಭಾಗಗಳನ್ನು ಹೊಂದಿರುವ ಮಂಗಳ ವೆಬ್ ಸೀರೀಸ್ ಉತ್ತಮ ಸಾಮಾಜಿಕ ಸಂದೇಶದೊಂದಿಗೆ ಪ್ರೇಕ್ಷಕರ ಮುಂದೆ ಬರುತಿದ್ದು, ದಯವಿಟ್ಟು ಎಲ್ಲರೂ ನೋಡಿ ಪ್ರೋತ್ಸಾಹಿಸಿ.