ಟೀಮ್ ಇಂಡಿಯಾಗೆ ಮತ್ತೊಂದು ಶಾಕ್- ಧವನ್, ಭುವಿ ನಂತರ ಮತ್ತೊಬ್ಬ ಆಟಗಾರನಿಗೆ ಗಾಯ

ಈ ಬಾರಿಯ ವಿಶ್ವಕಪ್ ಇದೀಗಷ್ಟೇ ಭಾರೀ ಕುತೂಹಲವನ್ನು ಕೆರಳಿಸುತ್ತಾ ಮುಂದೆ ಸಾಗುತ್ತಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಕೊಂಚ ಸ್ಪಷ್ಟ ಚಿತ್ರಣ ಕಾಣಿಸಿದರೂ ಸಹ ಬಲಾಢ್ಯ ತಂಡಗಳ ಕಾದಾಡುವಕೆಯನ್ನು ನೋಡಲು ಜನ ಕಾತರದಿಂದ ಕಾದು ಕುಳಿತಿದ್ದಾರೆ. ಹಲವಾರು ಪಂದ್ಯಗಳು ಮಳೆಗೆ ಆಹುತಿಯಾದರೂ ಸಹ, ವಿಶ್ವಕಪ್ ತನ್ನ ಕ್ರೇಜ್ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಆದರೆ ಎಲ್ಲಾ ತಂಡಗಳಿಗೂ ಗಾಯದ ಸಮಸ್ಯೆ ಕಾಡುತ್ತಿದೆ, ಈಗಾಗಲೇ ಹಲವಾರು ಸ್ಟಾರ್ ಆಟಗಾರರು ವಿಶ್ವಕಪ್ ನಿಂದ ಗಾಯದ ಸಮಸ್ಯೆಯಿಂದ ಹೊರ ಹೋಗಿದ್ದಾರೆ, ಭಾರತದ ಆರಂಭಿಕರಾದ ಶಿಖರ್ ಧವನ್ ಸಹ ಗಾಯಗೊಂಡು ವಿಶ್ವಕಪ್ ನಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಬ್ಬ ಭಾರತ ತಂಡದ ಕ್ರಿಕೆಟ್ ಆಟಗಾರ ಗಾಯಗೊಂಡಿದ್ದು, ದಿನೇದಿನೇ ಈ ಪಟ್ಟಿ ಬೆಳೆಯುತ್ತಿರುವುದು ಟೀಮ್ ಇಂಡಿಯಾಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಕಳೆದ ಭಾರತದ ಬದ್ಧವೈರಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ರವರು ಗಾಯಗೊಂಡು ಪಂದ್ಯದಿಂದ ಹೊರ ಹೋಗಿದ್ದರು. ಮುಂದಿನ ಪಂದ್ಯಗಳಿಗೆ ಲಭ್ಯರಾಗುತ್ತಾರಾ ಎಂಬ ಮಾಹಿತಿಯು ಸಹ ಇನ್ನೂ ಹೊರಬಿದ್ದಿಲ್ಲ, ಅಷ್ಟರಲ್ಲಾಗಲೇ ಪಾಕ್ ವಿರುದ್ಧದ ಪಂದ್ಯದಲ್ಲಿ ಭುವಿ ಸ್ಥಾನವನ್ನು ತುಂಬಿ, ಎರಡು ವಿಕೆಟ್ ಕಬಳಿಸಿದ ಭಾರತದ ಆಲ್ರೌಂಡರ್ ವಿಜಯಶಂಕರ್ ಅವರು ಇದೀಗ ಗಾಯಕ್ಕೆ ಗುರಿಯಾಗಿದ್ದಾರೆ. ಅಭ್ಯಾಸದ ವೇಳೆ ವಿಜಯಶಂಕರ್ ಅವರು ತುದಿಗಾಲಿಗೆ ಚಂಡನ್ನು ತಾಕಿಸಿಕೊಂಡು ಗಾಯ ಮಾಡಿಕೊಂಡಿದ್ದಾರೆ. ತಕ್ಷಣವೇ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದಿರುವ ವಿಜಯಶಂಕರ್ ರವರ ಸ್ಥಿತಿ ಹೇಗಿದೆ ಎಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ಆದರೆ ಸಂಜೆಯವರೆಗೂ ವಿಜಯಶಂಕರ್ ಅವರು ಯಾವುದೇ ಕ್ಯಾಮೆರಾಗಳ ಕಣ್ಣಿಗೆ ಸಿಕ್ಕಿಲ್ಲ, ಅಭ್ಯಾಸವು ಸಹ ಆರಂಭಿಸಿಲ್ಲ. ಹೀಗಿರುವಾಗ ಮುಂದಿನ ಆಫ್ಘಾನಿಸ್ಥಾನದ ವಿರುದ್ಧದ ಪಂದ್ಯಕ್ಕೆ ವಿಜಯಶಂಕರ್ ಅವರು ಫಿಟ್ ಆಗಲಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

Post Author: Ravi Yadav