ಹೊಸ ಸವಾಲೆಸಿದ ಚಕ್ರವರ್ತಿ ಸೂಲಿಬೆಲೆ- ಸ್ವೀಕರಿಸಲು ಸಿದ್ಧ ಎಂದ ಯುವ ಸಂಸದರು

ಹೊಸ ಸವಾಲೆಸಿದ ಚಕ್ರವರ್ತಿ ಸೂಲಿಬೆಲೆ- ಸ್ವೀಕರಿಸಲು ಸಿದ್ಧ ಎಂದ ಯುವ ಸಂಸದರು

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ಇಪ್ಪತ್ತೈದು ಸ್ಥಾನಗಳನ್ನು ಗಳಿಸಲು ತಮ್ಮದೇ ಆದ ಕೊಡುಗೆ ನೀಡಿದ ಚಕ್ರವರ್ತಿಸೂಲಿಬೆಲೆ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಷ್ಟು ದಿವಸ ನರೇಂದ್ರ ಮೋದಿ ಅವರು ದೇಶಕ್ಕಾಗಿ ಹಾಗೂ ಜನರಿಗಾಗಿ ಮಾಡಿದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ನರೇಂದ್ರ ಮೋದಿ ರವರನ್ನು ಗೆಲ್ಲಿಸಲು ದುಡಿದಿದ್ದ ಚಕ್ರವರ್ತಿ ಸೂಲಿಬೆಲೆ ರವರು ಇದೀಗ ಜನರ ಏಳಿಗೆಗಾಗಿ ಕರ್ನಾಟಕ ಸಂಸದರಿಗೆ ಹೊಸದೊಂದು ರೀತಿಯ ಸವಾಲನ್ನು ಎಸೆದಿದ್ದಾರೆ. ಚಕ್ರವರ್ತಿ ಸೂಲಿಬೆಲೆ ರವರು ಈ ಸವಾಲು ಎಸೆದ ಕೆಲವೇ ಕೆಲವು ಗಂಟೆಗಳಲ್ಲಿ ಕರ್ನಾಟಕದ ಭವಿಷ್ಯದ ನಾಯಕರು ಎಂದೇ ಖ್ಯಾತಿ ಪಡೆದು ಕೊಂಡಿರುವ ಯುವ ಸಂಸದರು ಬಹಳ ಹುಮ್ಮಸ್ಸಿನಿಂದ ಮುಂದೆ ಬಂದು ಚಾಲೆಂಜ್ ಸ್ವೀಕಾರ ಮಾಡಿದ್ದಾರೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಟೀಮ್ ಮೋದಿಯ ಸಂಸ್ಥಾಪಕ ಹಾಗೂ ಅಧ್ಯಕ್ಷ, ಯುವ ಬ್ರಿಗೇಡ್ ರೂವಾರಿ ಚಕ್ರವರ್ತಿ ಸೂಲಿಬೆಲೆಯವರು ರಾಜ್ಯದ 28 ಸಂಸದರನ್ನು ಉದ್ದೇಶಿಸಿ ಗ್ರಾಮ ಸ್ವರ್ಗ ಎಂಬ ಅಭಿಯಾನವನ್ನು ಆರಂಭಿಸುತ್ತಿದ್ದೇವೆ. ಈ ಸವಾಲನ್ನು ಕರ್ನಾಟಕದ ಸಂಸದರು ಸ್ವೀಕರಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದರು. ಗ್ರಾಮ ಸ್ವರ್ಗ ಅಭಿಯಾನದ ಮೂಲಕ ಚಾಲೆಂಜರ್ ಸ್ವೀಕರಿಸುವ ಸಂಸದರು ಒಂದು ಗ್ರಾಮವನ್ನು ದತ್ತು ಪಡೆದುಕೊಂಡು ಅಲ್ಲೇ ವಾಸ್ತವ್ಯ ಹೂಡಿ, ಗ್ರಾಮದ ಪ್ರತಿಯೊಂದು ಪರಿಸ್ಥಿತಿಯನ್ನು ಅವಲೋಕಿಸಿ ತದನಂತರ ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಈ ಸವಾಲಿನ ಮುಖ್ಯ ಉದ್ದೇಶ. ಈ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಸವಾಲೆಸೆದ ಚಕ್ರವರ್ತಿ ಸೂಲಿಬೆಲೆ ರವರ ಸವಾಲನ್ನು ಕರ್ನಾಟಕದ ಇಬ್ಬರು ಯುವ ಸಂಸದರು ಸ್ವೀಕಾರ ಮಾಡಿದ್ದಾರೆ.

ಮೊದಲಿಗೆ ಎರಡನೇ ಬಾರಿ ಸಂಸದರಾಗಿರುವ ಯುವನಾಯಕ ಪ್ರತಾಪ್ ಸಿಂಹರವರು ಪ್ರತಿಕ್ರಿಯಿಸಿ ನಾನು ಈ ಸವಾಲನ್ನು ಬಹಳ ಪ್ರೀತಿಯಿಂದ ಸ್ವೀಕಾರ ಮಾಡುತ್ತಿದ್ದೇನೆ. ಆದರೆ ನೀವು ನನಗೆ ಮಾರ್ಗದರ್ಶಿಯಾಗಿ ಕೆಲಸ ಮಾಡಬೇಕು, ಜೊತೆಗೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಿಮ್ಮ ಸಹಾಯ ಅತ್ಯಗತ್ಯ ಎಂದು ಕೇಳಿಕೊಂಡರು. ಈ ಮನವಿಗೆ ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ ಅವರು ಖಂಡಿತವಾಗಿಯೂ ಸಹಕರಿಸುತ್ತೇನೆ, ಉತ್ತಮ ಭವಿಷ್ಯಕ್ಕಾಗಿ ಕೈಜೋಡಿಸೋಣ. ನೀವು ಈ ಸವಾಲನ್ನು ಸ್ವೀಕರಿಸಿದ ಮೊದಲ ಸಂಸದರಾಗಿದ್ದೀರ ಆದಷ್ಟು ಬೇಗ ನಿಮ್ಮ ಕ್ಷೇತ್ರದಲ್ಲಿ ಬರುವ ಒಂದು ಹಳ್ಳಿಯನ್ನು ಆಯ್ಕೆ ಮಾಡಿ ನಿಮಗೆ ಮಾಹಿತಿ ನೀಡುತ್ತೇನೆ ಎಂದರು.

ತದನಂತರ ಸವಾಲನ್ನು ಸ್ವೀಕರಿಸಿದ್ದು, ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಟಿಕೆಟ್ ಪಡೆದುಕೊಂಡು ಗೆಲುವನ್ನು ದಾಖಲಿಸಿ ಕರ್ನಾಟಕದ ಕೇಂದ್ರಬಿಂದುವಾಗಿ ಸಂಸತ್ತನ್ನು ಪ್ರವೇಶಿಸಿರುವ ತೇಜಸ್ವಿ ಸೂರ್ಯ. ಹೌದು ತೇಜಸ್ವಿಯವರು ಸವಾಲನ್ನು ಸ್ವೀಕರಿಸಿ ಮಿಥುನ್ ಅಣ್ಣ, ನೀವು ನನ್ನಂತಹ ಲಕ್ಷಾಂತರ ಮಂದಿ ಯುವಕರಿಗೆ ಸ್ಪೂರ್ತಿ. ದಿವಂಗತ ಅನಂತ್ ಕುಮಾರ್ ಅವರು ರಾಗಿಹಳ್ಳಿ ಗ್ರಾಮದಲ್ಲಿ ಅದ್ಭುತ ಕೆಲಸಗಳನ್ನು ಮಾಡಿದ್ದಾರೆ. ನಾನು ಅವರ ಹಾದಿಯಲ್ಲೇ ನಡೆದು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳುವ ಮೂಲಕ ಗ್ರಾಮ ಸ್ವರ್ಗ ಅಭಿಯಾನದ ಚಾಲೆಂಜ್ ಸ್ವೀಕಾರ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೂಲಿಬೆಲೆ ಅವರು ನೀವು ಈ ಚಾಲೆಂಜ್ ಸ್ವೀಕಾರ ಮಾಡುತ್ತೀರಿ ಎಂದು ನನಗೆ ತಿಳಿದಿತ್ತು. ದಯವಿಟ್ಟು ನಿಮ್ಮ ಕ್ಷೇತ್ರದಲ್ಲಿ ಬರುವ ಯಾವುದಾದರೂ ಒಂದು ಸ್ಥಳವನ್ನು ನೀವೇ ಆಯ್ಕೆ ಮಾಡಿಕೊಳ್ಳಿ, ಅಲ್ಲಿ ನಮ್ಮ ಜೊತೆ ಯುವಕರು ಹಾಗೂ ಮಹಿಳೆಯರು ಕೈಜೋಡಿಸಿ ಆ ಸ್ಥಳವನ್ನು ಕಸಮುಕ್ತ ಮಾಡೋಣ ಹಾಗೂ ಅಭಿವೃದ್ಧಿ ಮಾಡೋಣ ಎಂದು ಉತ್ತರ ನೀಡಿದ್ದಾರೆ.