ಕೆಲವೇ ಗಂಟೆಗಳಲ್ಲಿ ಯು-ಟರ್ನ್ ಹೊಡೆದ ಬಿಜೆಪಿ ಸೇರುತ್ತೇನೆ ಎಂದಿದ್ದ ಶಾಸಕ!

ರಾಜ್ಯದಲ್ಲಿ ಇದೀಗ ದೋಸ್ತಿ ಸರ್ಕಾರ ಅಲ್ಲಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೂ ಸಹ ಬಿಜೆಪಿ ಪಕ್ಷದ ಮುಂದೆ ಕಂಡುಕೇಳರಿಯದ ರೀತಿಯಲ್ಲಿ ದೋಸ್ತಿಗಳು ಮಕಾಡೆ ಮಲಗಿದ್ದವು. ನರೇಂದ್ರ ಮೋದಿರವರ ಅಲೆಗೆ ಕೊಚ್ಚಿ ಕೊಂಡು ಹೋಗಿದ್ದ ದೋಸ್ತಿಗಳ ಮೈತ್ರಿ ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿದ್ದವು, ಒಂದು ವೇಳೆ ಬಿಜೆಪಿ ಪಕ್ಷವು ಆಪರೇಷನ್ ಕಮಲಕ್ಕೆ ಮುಂದಾಗಿದ್ದರೆ ಹಲವಾರು ಶಾಸಕರು ಬಿಜೆಪಿ ಪಕ್ಷ ಸೇರುವ ಸಾಧ್ಯತೆಗಳು ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಬಿಜೆಪಿ ಪಕ್ಷದ ಹೈಕಮಾಂಡ್ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿ ಬರುವ ಶಾಸಕರನ್ನು ಬೇಡ ಎನ್ನುವುದಿಲ್ಲ ಬದಲಾಗಿ ನಾವು ಯಾರನ್ನು ಕರೆತಂದು ಸ್ಥಾನಮಾನ ನೀಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಪಕ್ಷದ ಹೈಕಮಾಂಡ್ ತನ್ನ ನಿಲುವನ್ನು ಸ್ಪಷ್ಟ ಪಡಿಸಿತ್ತು.

ಇದೀಗ ಕೆಲವು ಗಂಟೆಗಳ ಹಿಂದಷ್ಟೇ ಎನ್ ಮಹೇಶ್ ರವರು ಬಿಜೆಪಿ ಪಕ್ಷದ ಹಲವಾರು ಮುಖಂಡರನ್ನು ಭೇಟಿ ಮಾಡಿ, ರಾಜ್ಯದ ಮಟ್ಟಿಗೆ ಬಿಜೆಪಿ ಪಕ್ಷದ ಜೊತೆಗೆ ಬಿಎಸ್ಪಿ ಪಕ್ಷವು ಮೈತ್ರಿ ಮಾಡಿಕೊಳ್ಳಲಿದೆ. ಹಾಗೂ ಬಿಜೆಪಿ ಪಕ್ಷವು ಸರ್ಕಾರ ರಚಿಸುವ ಸಂದರ್ಭ ಬಂದರೆ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಮಾತುಕತೆ ನಡೆಸಿದ್ದರೂ ಎನ್ನಲಾಗುತ್ತಿತ್ತು. ಆದರೆ ಸಚಿವ ಸ್ಥಾನ ನೀಡಿದರೆ ಮಾತ್ರ ಬೆಂಬಲ ನೀಡುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದರು ಎಂಬ ಮಾಹಿತಿ ಎಲ್ಲಾ ಮಾಧ್ಯಮಗಳಲ್ಲೂ ಹೊರಬಿದ್ದಿತ್ತು. ಇನ್ನು ಬಿಜೆಪಿ ಪಕ್ಷದ ಹೈಕಮಾಂಡ್ ನೀಡಿರುವ ಸ್ಪಷ್ಟ ಆದೇಶದಿಂದ ಕರ್ನಾಟಕ ಬಿಜೆಪಿ ಪಕ್ಷದ ನಾಯಕರು ಎನ್ ಮಹೇಶ್ ರವರ ಷರತ್ತಿಗೆ ಒಪ್ಪಿಕೊಂಡಿಲ್ಲ ಎನ್ನುವಂತೆ ಕಾಣುತ್ತಿದೆ. ಯಾಕೆಂದರೆ ಕೆಲವೇ ಕೆಲವು ಗಂಟೆಗಳ ನಂತರ ಎನ್ ಮಹೇಶ್ ರವರು ಯು ಟರ್ನ್ ಹೊಡೆದಿದ್ದು ನಾನು ಬಿಜೆಪಿ ಪಕ್ಷ ಸೇರುವ ಪ್ರಶ್ನೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಎನ್ ಮಹೇಶ್ ಹಾಗೂ ಬಿಜೆಪಿ ಪಕ್ಷದ ಮುಖಂಡರ ನಡುವೆ ಮಾತುಕತೆ ವಿಫಲವಾಗಿದ್ದು ಎನ್ ಮಹೇಶ್ ರವರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಅಥವಾ ಸೇರುವ ಸಾಧ್ಯತೆಗಳು ಇಲ್ಲ ಎಂಬುದು ಸ್ಪಷ್ಟವಾಗಿದೆ.

Post Author: Ravi Yadav