ಜೆ ಪಿ ಹೆಗಡೆ ಗೆ ಡೌಟ್ ! ಶುರುವಾಯಿತು ಶೋಭಾ ಕರಂದ್ಲಾಜೆ ಹಾಗೂ ಯಶ್ಪಾಲ್ ಸುವರ್ಣ ರವರ ನಡುವೆ ಫೈನಲ್ ಫೈಟ್

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳಾದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಯಶ್ ಪಾಲ್ ಸುವರ್ಣ ನಡುವಿನ ಹಣಾಹಣಿ ನಿರ್ಣಾಯಕ ಹಂತ ತಲುಪಿದೆ.ರಾಜ್ಯ ಮಟ್ಟದ ನಾಯಕಿಯಾಗಿರುವ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಆಯ್ಕೆಗೆ ಕ್ಷೇತ್ರದ 7 ಶಾಸಕರ ಹಾಗೂ ಪಕ್ಷದ ಕಾರ್ಯಕರ್ತರು ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯಾಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪನವರ ಆಪ್ತವಲಯದಲ್ಲಿ ಗುರುತಿಸಿ ಕೊಂಡಿರುವ ಶೋಭಾ ಹಿಂದಿನಿಂದಲೂ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಹೊಂದಿರುವುದರಿಂದ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಇವರ ನಡೆ ಕ್ಷೇತ್ರದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆ ಮೀನುಗಾರ ನಾಯಕ, ಹಿಂದೂ ಪರ ಸಂಘಟನೆಗಳೊಂದಿಗೆ ಹಾಗೂ ಆರ್ ಎಸ್ ಎಸ್ ನೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವ ಯಶ್ ಪಾಲ್ ಸುವರ್ಣರ ಹೆಸರು ಕೂಡ ಈಗಾಗಲೇ ಹೈಕಮಾಂಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಈಗಾಗಲೇ ಉಡುಪಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, 10 ರಾಜ್ಯದ ಮೀನುಗಾರರನ್ನೊಳಗೊಂಡ ಅಖಿಲ ಭಾರತ ಮೀನುಗಾರರ ವೇದಿಕೆಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮೀನುಗಾರರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ, ಕೇಂದ್ರ ಸರಕಾರದಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಘೋಷಿಸುವಲ್ಲಿ ಕೂಡಾ ಯಶ್ ಪಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ.

ರಾಜ್ಯದಾದ್ಯಂತ ಮೊಗವೀರ, ಕೋಲಿ, ಗಂಗಾಮತ, ಬೆಸ್ತ, ಖಾರ್ವಿ ಮುಂತಾದ ವಿವಿಧ ಹೆಸರಿನಲ್ಲಿ ಗುರುತಿಸಿಕೊಂಡಿರುವ ಮೀನುಗಾರರ ಸಮುದಾಯ ರಾಜ್ಯದಲ್ಲಿ 10 ಶೇಕಡಾ ಮತದಾರರನ್ನು ಹೊಂದಿದೆ. ಕರಾವಳಿಯ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮೀನುಗಾರ ಸಮುದಾಯದ ಯುವ ನಾಯಕ ಯಶ್ ಪಾಲ್ ಸುವರ್ಣ ಅಭ್ಯರ್ಥಿಯಾಗಿ ಹೊರಹೊಮ್ಮಿದಲ್ಲಿ 4 ಕ್ಷೇತ್ರದಲ್ಲೂ ಬಿಜೆಪಿಗೆ ಮತ್ತಷ್ಟು ಪೂರಕ ವಾತಾವರಣ ನಿರ್ಮಾಣವಾಗಲಿದೆ.

ಬಿಜೆಪಿಯಲ್ಲಿ ಸಕ್ರಿಯರಾಗಿರುವ ಜನಪ್ರಿಯ ನಾಯಕ ಜಯಪ್ರಕಾಶ್ ಹೆಗ್ಡೆ ಕೂಡಾ ಅವಕಾಶಕ್ಕಾಗಿ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಬಂಟ ಸಮುದಾಯದ ಶ್ರೀ ನಳಿನ್ ಕುಮಾರ್ ಕಟೀಲು ದಕ್ಷಿಣ ಕನ್ನಡದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿರುವುದರಿಂದ ಹೆಗ್ಡೆಯವರಿಗೆ ಹಿನ್ನಡೆಯಾಗಲಿದೆ.ಇದೀಗ ಚೆಂಡು ನರೇಂದ್ರ ಮೋದಿಯವರ ಅಂಗಣದಲ್ಲಿದ್ದು, ಮೋದಿಯವರು ತೆಗೆದು ಕೊಳ್ಳುವ ನಿರ್ಧಾರದ ಮೇಲೆ ಕ್ಷೇತ್ರದ ಜನತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ..

Post Author: Ravi Yadav