ಬಾರ್ ಸಪ್ಲೇಯರ್ ಆಗಿ ಕೆಲಸ ಮಾಡಿ ಐಪಿಎಸ್ ಆದ ಕಥೆ

ಹಿರಿಯರು ಹೇಳಿದ ಹಾಗೆ ಕನಸು ಕಂಡರೆ ಸಾಲದು ಕಂಡ ಕನಸನ್ನು ನನಸು ಮಾಡಿಕೊಳ್ಳಲು, ತಮ್ಮ ಗುರಿಯನ್ನು ಮುಟ್ಟುತ್ತೇವೆ ಎಂಬ ಛಲದಿಂದ ಹೋರಾಡಬೇಕು. ಬಡತನವಿರಲಿ ಅದೆಂತಹ ಕಷ್ಟವೇ ಇರಲಿ ಕನಸನ್ನು ಈಡೇರಿಸಿಕೊಳ್ಳಲು ಯಾವುದು ಅಡ್ಡ ಬರುವುದಿಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ ನೋಡಿ. ಇಲ್ಲಿ ನಾವು ಹೇಳಲು ಹೊರಟಿರುವ ಕಥೆ ಸಾಮಾನ್ಯ ಯುವ ಕನಸಲ್ಲ ಬದಲಾಗಿ ಕನ್ನಡಿಗರ ಹೆಮ್ಮೆಯ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ ಜೀವನ ಚರಿತ್ರೆ.

ಐಪಿಎಸ್ ಅಧಿಕಾರಿಯಾದ ನಂತರ ಅವರು ಮಾಡಿದ ಕಾರ್ಯಗಳು ಯುವಕರಿಗೆ ಇನ್ನಿಲ್ಲದ ಸ್ಪೂರ್ತಿಯನ್ನು ನೀಡುತ್ತಿದೆ. ಆದರೆ ಇವರ ಬಗ್ಗೆ ಅದೆಷ್ಟು ಜನರಿಗೆ ತಿಳಿದಿಲ್ಲ, ಬಡತನ ಸಾಧನೆಗೆ ಅಡ್ಡಿಯಾಗಲಾರದು ಎಂಬುದಕ್ಕೆ ಇವರು ಸ್ಪಷ್ಟ ನಿದರ್ಶನವಾಗಿ ನಿಂತಿದ್ದಾರೆ. ಇವರ ಜೀವನ ಶೈಲಿ ಹಾಗೂ ಪಟ್ಟ ಕಷ್ಟಗಳನ್ನು ಕೇಳಿದರೆ ಖಂಡಿತ ಒಂದು ಕ್ಷಣ ನೀವು ದಂಗ್ ಆಗುತ್ತೀರಾ.

ಮೊದಲಿನಿಂದಲೂ ಐಪಿಎಸ್ ಅಧಿಕಾರಿಯಾಗಿರುವ ರವಿ ಡಿ ಚೆನ್ನಣ್ಣ ರವರಿಗೆ ಐ ಪಿ ಎಸ್ ಅಧಿಕಾರಿ ಆಗಬೇಕು ಎಂಬ ಕನಸು ಇತ್ತು, ಆದರೆ ಕುಟುಂಬ ಆರ್ಥಿಕ ಸಮಸ್ಯೆಗೆ ಸಿಲುಕಿತ್ತು. ಆದರೆ ಅಷ್ಟಕ್ಕೆ ಸುಮ್ಮನಾಗದ ರವಿ ರವರು ಎದುರಾದ ಸಮಸ್ಯೆಗಳನ್ನು ಸಾಧನೆಗಳ ಮೆಟ್ಟಿಲುಗಳನ್ನಾಗಿ ಪರಿವರ್ತನೆ ಮಾಡಿಕೊಂಡು ಸಾಧನೆಯ ಶಿಖರವನ್ನು ಏರಿ ಇಂದು ಇಡೀ ಭಾರತದಲ್ಲಿ ತಮ್ಮದೇ ಆದ ಕಾರ್ಯವೈಖರಿಯ ಮೂಲಕ ಹೆಸರು ಮಾಡಿದ್ದಾರೆ ಹಾಗೂ  ದುಷ್ಟರಿಗೆ ಸಿಂಹ ಸ್ವಪ್ನವಾಗಿ ಕಾಡತೊಡಗಿದ್ದಾರೆ.

ಗದಗ ಜಿಲ್ಲೆಯ ನೀಲಗುಂದ ಎಂಬ ಹಳ್ಳಿಯಲ್ಲಿ ರವಿ ಡಿ ಚನ್ನಣ್ಣರವರ ಜನಿಸಿದರು. ಹುಟ್ಟಿನಿಂದಲೂ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಹೇಳಿಕೊಳ್ಳುವಷ್ಟು ಇರಲಿಲ್ಲ. ತಂದೆ ದ್ಯಾಮಪ್ಪ, ತಾಯಿ ರತ್ನಮ್ಮ ಇಬ್ಬರು ಕೃಷಿ ಮಾಡಿ ಜೀವನವನ್ನು ಸಾಗಿಸುತ್ತಿದ್ದರು. ಇನ್ನು ಇವರ ಕುಟುಂಬಕ್ಕೆ ಸಹೋದರ ರಾಘವೇಂದ್ರ ರವರು ಆಧಾರವಾಗಿ ನಿಂತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಬೆಳೆದ ರವಿ ರವರಿಗೆ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಬಹಳ ಕ್ಲಿಷ್ಟಕರವಾದ ಸಂಗತಿಯಾಗಿ ಮಾರ್ಪಟ್ಟಿತ್ತು.

ಹುಟ್ಟೂರಿನಲ್ಲಿ ಪ್ರಾರ್ಥಮಿಕ ಶಿಕ್ಷಣ ಪಡೆದ ಇವರು ವಿದ್ಯಾ ಕಾಶಿ ಎಂದೇ ಹೆಸರು ಪಡೆದಿರುವ ಧಾರವಾಡದಲ್ಲಿ ಪದವಿಯನ್ನು ಪಡೆದುಕೊಂಡರು. ಪದವಿ ಓದುವಾಗ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಹಾಗೂ ವಿದ್ಯೆಗೆ ಬೇಕಾದ ಹಣಕ್ಕಾಗಿ ಬಾರ್ ಸಪ್ಲೇಯರ್ ಆಗಿ ಹಾಗೂ ಹಮಾಲಿ ಯಾಗಿ ನಾನಾ ತರದ ಕೆಲಸವನ್ನು ಮಾಡಿದ್ದಾರೆ.

ಪದವಿ ಪಡೆದು ಕೊಂಡ ನಂತರ ಐಪಿಎಸ್ ಅಧಿಕಾರಿಯಾಗಲು ಕಾಂಪಿಟೇಟಿವ್ ಎಕ್ಸಾಮ್ ಕೋಚಿಂಗ್ ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅದೇಗೋ ಹಣ ಹೊಂದಿಸಿ ಹೈದರಾಬಾದಿನಲ್ಲಿರುವ ಟಾರ್ಗೆಟ್ ಎಂಬ ಕೋಚಿಂಗ್ ಸಂಸ್ಥೆಗೆ ಸೇರಿ ಕೊಂಡು 2008ರಲ್ಲಿ ಯುಪಿಎಸ್ ಸಿ ಎಕ್ಸಾಮ್ ಬರೆದು 703 ರ್ಯಾಂಕ್ ಪಡೆದು ಕೊಂಡು ಕಂಡ ಕನಸನ್ನು ನನಸು ಮಾಡಿಕೊಳ್ಳುವ ದಿಟ್ಟ ಹೆಜ್ಜೆ ಇಡುತ್ತಾರೆ.

ತದನಂತರ ಕಲಬುರ್ಗಿಯಲ್ಲಿ ಪ್ರೊಬೆಷನರಿ ಪೇರಿಯಡ್ ಮುಗಿಸಿ ಬೆಳಗಾವಿಯಲ್ಲಿ ಹೆಚ್ಚುವರಿ ಎಸ್ಪಿ ಆಗಿ ಕೆಲಸವನ್ನು ಆರಂಭಿಸುತ್ತಾರೆ. ನಂತರ ನಡೆದಿದ್ದ ಇತಿಹಾಸ, ದುಷ್ಟರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುವ ಇವರು ಹಲವಾರು ಯುವಕರ ಆದರ್ಶ ವ್ಯಕ್ತಿಯಾಗಿ, ಇದೀಗ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ರಾತ್ರೋರಾತ್ರಿ ಅದೆಷ್ಟು ರೌಡಿಗಳನ್ನು ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.

ಇಂತಹ ವ್ಯಕ್ತಿಗಳು ನಮ್ಮ ಮಧ್ಯೆ ಇರುವುದು ನಮ್ಮ ಪುಣ್ಯ ಎಂದೇ ಹೇಳಬಹುದು. ಮಹಾನ್ ದೇಶಭಕ್ತ ರಾಗಿರುವ ಇವರು ಭಗತ್ ಸಿಂಗ್ ಅವರ ದೊಡ್ಡ ಅಭಿಮಾನಿ, ಇವರ ಜೀವನ ಕಥೆಯನ್ನು ಕೇಳಿದರೆ ಎಂತಹ ವ್ಯಕ್ತಿಗಳಿಗೂ ಹುಮ್ಮಸ್ಸು ಇಮ್ಮಡಿಗೊಳ್ಳುತ್ತದೆ.

Post Author: Ravi Yadav