ರೋಹಿತ್- ರಾಯುಡು ಏಟಿಗೆ ವಿಂಡೀಸ್ ಧೂಳಿಪಟ: ಭಾರತಕ್ಕೆ ಭರ್ಜರಿ ಜಯ..!

ರೋಹಿತ್- ರಾಯುಡು ಏಟಿಗೆ ವಿಂಡೀಸ್ ಧೂಳಿಪಟ: ಭಾರತಕ್ಕೆ ಭರ್ಜರಿ ಜಯ..!

0

ಮುಂಬೈ.ಅ.2: ಇಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 4 ನೇ ಏಕದಿನ ಪಂದ್ಯದಲ್ಲಿ ಭಾರತ 224 ರನ್‌ಗಳ ಭಾರಿ ಅಂತರದ ಭರ್ಜರಿ ಜಯ ಸಾಧಿಸಿದೆ. ಗೆಲುವಿಗೆ 378 ರನ್‌ಗಳ ಕಠಿಣ ಸವಾಲನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 36.2 ಓವರ್‌ಗಳಲ್ಲಿ 153 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲ್ ಔಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಈ ಮೂಲಕ ಸರಣಿಯಲ್ಲಿ 2-1 ಅಂತರದ ಸಾಧಿಸಿದೆ.

ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡೈಯಾ ರೋಹಿತ್ ಶರ್ಮಾ ಮತ್ತು ಅಂಬಾಟಿ ರಾಯುಡು ಶತಕದ ನೆರವಿನಿಂದ ಭಾರತ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 377 ರನ್ ಗಳಿಸುವ ಮೂಲಕ ವಿಂಡೀಸ್ 378 ರನ್ ಗಳ ಬಿಗ್ ಟಾರ್ಗೆಟ್ ನೀಡಿತ್ತು. ಆರಂಭಿಕ ಆಟಗಾರರಾದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಬಹು ಬೇಗನೆ ಔಟಾದರೂ ಕೂಡ ರೋಹಿತ್ ಮತ್ತು ಅಂಬಾಟಿ ರಾಯುಡು ಅವರ ಜೊತೆಯಾಟ ವಿದೇಶ್ ಬೌಲರ್ ಗಳನ್ನು ಕಂಗೆಡಿಸಿತು.

ರೋಹಿತ್ ಕೇವಲ 97 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಇದು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್’ನಲ್ಲಿ ಬಾರಿಸಿದ 21ನೇ ಶತಕವಾಗಿದೆ. ಈ ಶತಕದೊಂದಿಗೆ ರೋಹಿತ್ ಹಲವು ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ. ಇದೇ ಸರಣಿಯಲ್ಲಿ ರೋಹಿತ್ ಶರ್ಮಾ ಬಾರಿಸಿದ ಎರಡನೇ ಶತಕ ಇದಾಗಿದೆ. ಚಾಂಪಿಯನ್ಸ್ ಟ್ರೋಫಿಯಿಂದ ಇಲ್ಲಿಯವರೆಗೆ ರೋಹಿತ್ ಪ್ರತಿ ಸರಣಿಯಲ್ಲೂ ಶತಕ ಸಿಡಿಸಿದ್ದಾರೆ. ಇನ್ನು 2013ರಿಂದೀಚೆಗೆ ವಿರಾಟ್ ಕೊಹ್ಲಿ (25) ಬಳಿಕ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೂ ರೋಹಿತ್ ಭಾಜನರಾಗಿದ್ದಾರೆ. ರೋಹಿತ್ 2013ರಿಂದೀಚೆಗೆ 19 ಶತಕ ಸಿಡಿಸಿದ್ದಾರೆ.ಆರಂಭಿಕನಾಗಿ ಅತಿ ಕಡಿಮೆ ಇನ್ನಿಂಗ್ಸ್’ಗಳಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಈಗ ರೋಹಿತ್ ಎರಡನೇ ಸ್ಥಾನಕ್ಕೇರಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಹಾಶೀಂ ಆಮ್ಲಾ ಕೇವಲ 102 ಇನ್ನಿಂಗ್ಸ್’ಗಳಲ್ಲಿ 19 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ನಂತರ ಅಂಬಾಟಿ ರಾಯುಡು ಕೂಡ ಲಯಕ್ಕೆ ಮರಳಿ ಕೇವಲ 81 ಎಸೆತಗಳಲ್ಲೇ ಶತಕ ಸಿಡಿಸುವ ಮೂಲಕ ತಮ್ಮ ಸ್ಥಾನವನ್ನು ಬಧ್ರಗೊಳಿಸುವ ಆಟವಾಡಿದ್ದಾರೆ. ಆದರೆ ರನ್ ಔಟ್ ಆಗುವ ಮೂಲಕ ದೊಡ್ಡ ಮೊತ್ತ ಕಲೆಹಾಕುವ ಆಸೆ ಈಡೇರಲಿಲ್ಲ. ಅಂತಿಮ ಕ್ಷಣದಲ್ಲಿ ಬಂದಂತಹ ಮಹೇಂದ್ರ ಸಿಂಗ್ ಧೋನಿ ಕೂಡ ಅಬ್ಬರಿಸಿದರೂ ಕೂಡ ಕೇವಲ 23 ರನ್ ಗಳಿಗೆ ತೃಪ್ತಿಪಡಬೇಕಾಯಿತು. ಕೊನೆಯಲ್ಲಿ ಕೇದಾರ್ ಜಾದವ್ ಮತ್ತು ರವೀಂದ್ರ ಜಡೇಜಾ ಉತ್ತಮ ಆಟ ಪ್ರದರ್ಶಿಸಿ ಭಾರತ ತಂಡ 50 ಓವರ್ ಗಳಲ್ಲಿ 377 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಲು ಸಾಧ್ಯವಾಯಿತು .

ವೆಸ್ಟ್‌ಇಂಡೀಸ್ ಪರ ಗರಿಷ್ಠ ಸ್ಕೋರ್ ದಾಖಲಿಸಿದ ನಾಯಕ ಜಾಸನ್ ಹೋಲ್ಡರ್(ಔಟಾಗದೆ 54) ಹೋರಾಟ ಫಲ ನೀಡಲಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ಶಿಮ್ರಾನ್ ಹೆಟ್ಮೆಯೆರ್(13) , ಶಾಯ್ ಹೋಪ್(0),ಆಯಶ್ಲೆ ನರ್ಸೆ (8) ಇವರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ಹಿನ್ನೆಲೆಯಲ್ಲಿ ಭಾರತದ ತಂಡ ಸುಲಭವಾಗಿ ಗೆಲುವು ದಾಖಲಿಸಿತು. ಭಾರತದ ಖಲೀಲ್ ಅಹ್ಮದ್ (13ಕ್ಕೆ 3), ಕುಲ್‌ದೀಪ್ ಯಾದವ್ (43ಕ್ಕೆ 3) ತಲಾ 3 ವಿಕೆಟ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ :
ಭಾರತ : 377/5 * (50 ov)
ವೆಸ್ಟ್ ಇಂಡೀಸ್ : 153 (36.2/50 ov, target 378)