ವಾಟ್ಸಾಪ್‌ನಲ್ಲಿ ಈ ಮಾರ್ಕ್ ಬಂದರೆ ನೀವು ಜೈಲಿಗೆ ?

ವಾಟ್ಸಾಪ್‌ನಲ್ಲಿ ಸುಳ್ಳು ಸುದ್ದಿಗಳು ಹಬ್ಬುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ನೀವು ಕಳುಹಿಸಿದ ಪ್ರತಿಯೊಂದು ಸಂದೇಶವನ್ನು ಓದುತ್ತಿದೆ. ಒಂದು ವೇಳೆ ನೀವು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಗೊತ್ತಾದರೆ ಜೈಲಿಗೆ ಹೋಗಬೇಕಾಗುತ್ತದೆ. ಇಂಥದ್ದೊಂದು ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವದಂತಿಗಳನ್ನು ತಡೆಯಲು ವಾಟ್ಸಾಪ್‌ ರೂಪಿಸಿರುವ ಹೊಸ ನಿಯಮದ ಪ್ರಕಾರ, ಎರಡು ನೀಲಿ ಟಿಕ್‌ ಮಾರ್ಕ್ ಜೊತೆ ಒಂದು ರೆಡ್‌ ಟಿಕ್‌ ಮಾರ್ಕ್ ಬಂದರೆ ಅಪಾಯಕಾರಿ ಎಂದರ್ಥ. ಆಗ ಸುಳ್ಳು ಸುದ್ದಿಯನ್ನು ಹಬ್ಬಿಸಿದ ಆರೋಪದ ಮೇಲೆ ಪೊಲೀಸರು ನಿಮ್ಮನ್ನು ಬಂಧಿಸಬಹುದಾಗಿದೆ. ಎರಡು ನೀಲಿ ಟಿಕ್‌ ಮಾರ್ಕ್ ಜೊತೆ ಮತ್ತೊಂದು ಟಿಕ್‌ ಮಾರ್ಕ್ ಬಂದರೆ ನೀವು ಯಾರಿಗೆ ಸಂದೇಶವನ್ನು ಕಳುಹಿಸಿದ್ದೀರೋ ಅದನ್ನು ಅವರು ಓದಿದ್ದಾರೆ. ಆದರೆ, ಸರ್ಕಾರ ಇನ್ನೂ ಓದಿಲ್ಲ. ಮೂರು ನೀಲಿ ಟಿಕ್‌ ಮಾರ್ಕ್ ಬಂದರೆ ನೀವು ಕಳುಹಿಸಿದ ಸಂದೇಶವನ್ನು ಸರ್ಕಾರ ಓದಿದೆ ಮತ್ತು ಅದು ಸರಿ ಇದೆ ಎಂದರ್ಥ.

ಆದರೆ, ಎರಡು ನೀಲಿ ಟಿಕ್‌ಗಳ ಜೊತೆ ಒಂದು ಕೆಂಪು ಬಣ್ಣದ ಟಿಕ್‌ ಮಾರ್ಕ್ ಬಂದರೆ ನೀವು ಕಳುಹಿಸಿದ ಸಂದೇಶವನ್ನು ಸರ್ಕಾರ ಓದಿದೆ ಆದರೆ, ಅದು ಸುಳ್ಳು ಸಂದೇಶವಾಗಿದೆ. ಈ ಕಾರಣಕ್ಕಾಗಿ ಪೊಲೀಸರು ನಿಮ್ಮನ್ನು ಬಂಧಿಸಬಹುದಾಗಿದೆ ಎಂಬ ಸಂದೇಶ ಹರಿದಾಡುತ್ತಿದೆ.

ಆದರೆ, ವಾಟ್ಸಾಪ್‌ ಈ ರೀತಿಯ ಯಾವುದೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಲ್ಲ. ಸರ್ಕಾರ ಕೂಡ ಜನರ ಸಂದೇಶವನ್ನು ಓದುತ್ತಿಲ್ಲ. ವಾಟ್ಸಾಪ್‌ನಲ್ಲಿ ಹರಿದಾಡುವ ಕೋಟ್ಯಂತರ ಸಂದೇಶವನ್ನು ಪರಿಶೀಲಿಸುವುದು ಅಸಾಧ್ಯ. 2015ರಲ್ಲಿ ಆಂಗ್ಲ ವೆಬ್‌ಸೈಟ್‌ವೊಂದು ತಮಾಷೆಗಾಗಿ ಹರಿಬಿಟ್ಟಸುದ್ದಿ ಇದೀಗ ವೈರಲ್‌ ಆಗಿದೆ.

Creadits: Suvarna News

TechWhatsApp
Comments (0)
Add Comment