ಪೆಟ್ರೋಲ್ ಪಂಪ್‌ಗಳಲ್ಲಿ ವಂಚನೆಯಿಂದ ಪಾರಾಗುವುದು ಹೇಗೆ….?

ಪೆಟ್ರೋಲ್ ಪಂಪ್‌ಗಳಲ್ಲಿ ವಂಚನೆಯಿಂದ ಪಾರಾಗುವುದು ಹೇಗೆ….?

0

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚುತ್ತಲೇ ಇವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ನಾವು ಸರಕಾರವನ್ನು ದೂಷಿಸುವುದನ್ನು ಬಿಟ್ಟರೆ ಬೆಲೆಯೇರಿಕೆಯ ವಿರುದ್ಧ ಬೇರೇನನ್ನೂ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮ ಸಂಪೂರ್ಣ ನಿಯಂತ್ರಣದಲ್ಲಿತರುವ ವಿಷಯವೊಂದಿದೆ.

ಅದು ಪೆಟ್ರೋಲ್ ಪಂಪ್‌ಗಳಲ್ಲಿ ವಂಚನೆಗೆ ಸಿಲುಕದಂತೆ ನಮ್ಮನ್ನು ಕಾಪಾಡಿಕೊಳ್ಳುವುದು. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಧನವನ್ನು ಹಾಕುವುದು,ಇಂಧನಗಳ ಕಲಬೆರಕೆ ಇವು ನಮ್ಮ ದೇಶದಲ್ಲಿ ಸಾಮಾನ್ಯ ವಿದ್ಯಮಾನಗಳಾಗಿವೆ. ಆದರೂ ಕೆಲವು ಎಚ್ಚರಿಕೆಗಳನ್ನು ವಹಿಸಿದರೆ ಇಂತಹ ಮೋಸಗಳಿಂದ ಪಾರಾಗಬಹುದು.

ಫಿಲ್ಟರ್ ಪೇಪರ್ ಟೆಸ್ಟ್

ಫಿಲ್ಟರ್ ಪೇಪರ್‌ನ ಮೇಲೆ ಪೆಟ್ರೋಲ್‌ನ ಕೆಲವು ಹನಿಗಳನ್ನು ಹಾಕಿ. ಪೆಟ್ರೋಲ್ ಶುದ್ಧವಾಗಿದ್ದರೆ ಅದು ಯಾವುದೇ ಕಲೆಗಳನ್ನುಳಿಸದೆ ಆವಿಯಾಗುತ್ತದೆ. ಆದರೆ ಅದು ಕಲಬೆರಕೆಯದಾಗಿದ್ದರ ಕಾಗದದ ಮೇಲೆ ಕೆಲವು ಕಲೆಗಳನ್ನು ಉಳಿಸುತ್ತದೆ.

ಯಂತ್ರದಲ್ಲಿ ಮೀಟರ್ ಮೇಲೆ ಗಮನವಿರಲಿ

ನೀವು ವಾಹನಗಳಿಗೆ ಇಂಧನವನ್ನು ತುಂಬಿಸಿಕೊಳ್ಳುವಾಗ ತುಂಬಿಸುವ ವ್ಯಕ್ತಿ ಸ್ಟಾರ್ಟ್-ಸ್ಟಾಪ್ ಟ್ರಿಕ್ ನಡೆಸುತ್ತಾನೆಯೇ ಎನ್ನುವುದನ್ನು ಗಮನಿಸಿ. ನಿಮ್ಮ ವಾಹನಕ್ಕೆ ಇಂಧನ ಹಾಕುವ ಮುನ್ನ ಮೀಟರ್‌ನಲ್ಲಿ ಝೀರೊ ರೀಡಿಂಗ್ ಇರುವುದನ್ನು ಖಚಿತಪಡಿಸಿಕೊಳ್ಳಿ.

ಐದು ಲೀಟರ್ ಮಾಪನ ಪರೀಕ್ಷೆ

ನೀವು ಪೆಟ್ರೋಲ್ ಪಂಪ್‌ಗೆ ತೆರಳಿದ್ದ ಸಂದರ್ಭ ಅಳತೆಯ ಬಗ್ಗೆ ಅನುಮಾನವಿದ್ದರೆ ಐದು ಲೀಟರ್ ಮಾಪನ ಪರೀಕ್ಷೆಗೆ ಆಗ್ರಹಿಸಿ. ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿಯೂ ತೂಕ ಮತ್ತು ಅಳತೆಗಳ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ ಐದು ಲೀಟರ್‌ನ ಮಾಪನ ಸಾಧನವಿರುತ್ತದೆ. ಯಂತ್ರದಿಂದ ಐದು ಲೀಟರ್ ಇಂಧನವನ್ನು ಈ ಮಾಪನದಲ್ಲಿ ಹಾಕಿದಾಗ ಅದು ಸಂಪೂರ್ಣವಾಗಿ ತುಂಬಿರಬೇಕು. ಇಲ್ಲದಿದ್ದರೆ ಆ ಪೆಟ್ರೋಲ್ ಪಂಪ ಅಳತೆಯಲ್ಲಿ ವಂಚಿಸುತ್ತಿದೆ ಎಂದೇ ಅರ್ಥ.

ಸರಿಯಾದ ಬೆಲೆ

ನೀವು ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಿ. ಆದರೆ ಅದರ ಮಾರಾಟ ಬೆಲೆಯನ್ನು ಪರೀಕ್ಷಿಸಿ. ಡೀಲರ್ ಇದನ್ನು ಪ್ರಮುಖವಾಗಿ ಕಾಣಿಸುವಂತೆ ಪ್ರದರ್ಶಿಸಬೇಕಾಗುತ್ತದೆ. ಇದಕ್ಕಿಂತ ಹೆಚ್ಚಿನ ಬೆಲೆಯನ್ನು ಡೀಲರ್ ವಸೂಲು ಮಾಡುವಂತಿಲ್ಲ. ಸಾಧ್ಯವಾದರೆ ಪ್ರತಿ ಬಾರಿ ಇಂಧನ ಹಾಕಿಸಿಕೊಂಡಾಗ ರಸೀದಿಯನ್ನು ಪಡೆಯಿರಿ.

Complete Credits: Vaartha Bharathi