ಬಿಗ್ ಬ್ರೇಕಿಂಗ್: ಬಿಜೆಪಿ ಸೇರ್ಪಡೆಗೆ ಕಾಂಗ್ರೆಸ್ ನಾಯಕ ರೆಡಿ.!

ಮೈತ್ರಿಕೂಟ ಸರ್ಕಾರದ ನೂತನ ಸಚಿವರುಗಳ ಪ್ರಮಾಣ ವಚನದ ಬಳಿಕ ಸಚಿವ ಸ್ಥಾನ ವಂಚಿತರ ಅಸಮಾಧಾನ ಭುಗಿಲೆದ್ದಿದ್ದು, ಉಭಯ ಪಕ್ಷಗಳ ಹಲವು ಶಾಸಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅತೃಪ್ತ ಕಾಂಗ್ರೆಸ್ ಶಾಸಕರುಗಳು ಸಭೆ ಮೇಲೆ ಸಭೆ ನಡೆಸುತ್ತಿದ್ದು, ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಪಕ್ಷದ ವರಿಷ್ಠರು ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸುತ್ತಿಲ್ಲ. ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ನಿವಾಸದಲ್ಲಿ ಈ ಎಲ್ಲ ಚಟುವಟಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸಚಿವರುಗಳಾದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್ ಹಾಗೂ ಆರ್.ವಿ. ದೇಶಪಾಂಡೆ ಭೇಟಿ ನೀಡಿ ಎಂ.ಬಿ. ಪಾಟೀಲ್ ಅವರ ಮನವೊಲಿಸುವ ಯತ್ನ ನಡೆಸಿದ್ದಾರೆ.

ಇದರ ಮಧ್ಯೆ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹಾಗೂ ಕುರುಬ ಸಮಾಜದ ನಾಯಕ ಹೆಚ್.ಎಂ. ರೇವಣ್ಣ ಬಿಜೆಪಿ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದಾರೆನ್ನಲಾಗಿದೆ.

ಬಿಜೆಪಿ ನಾಯಕರುಗಳು ಹೆಚ್.ಎಂ. ರೇವಣ್ಣ ಅವರನ್ನು ಸಂಪರ್ಕಿಸಿ ಪಕ್ಷ ಸೇರ್ಪಡೆಗೆ ಆಹ್ವಾನಿಸಿದ್ದಾರೆನ್ನಲಾಗಿದ್ದು, ಇದಕ್ಕೆ ರೇವಣ್ಣ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದುಬಂದಿದೆ.

Post Author: Ravi Yadav