ಕಟಕ್ ನಲ್ಲಿ ಕುಟಿಕಿದ ಮೋದಿ: ಇವರ ಮಾತುಗಳು ನಿಜವೇ?

ಕಟಕ್ ನಲ್ಲಿ ಕುಟಿಕಿದ ಮೋದಿ: ಇವರ ಮಾತುಗಳು ನಿಜವೇ?

0

“ಆಡಳಿತದಲ್ಲಿ ಅರಾಜಕತೆ ಹಾಗೂ ಗೊಂದಲವನ್ನು ಹೊಡೆದೋಡಿಸಿದ್ದೇವೆ. ಭಾರತ ಬದಲಾಗಬಲ್ಲದು ಎಂಬ ನಂಬಿಕೆಯನ್ನು 125 ಕೋಟಿ ಜನರಲ್ಲಿ ಮೂಡಿಸಿದ್ದೇವೆ. ಇಂದು ದೇಶ ಕಾಳಧನದಿಂದ ಜನಧನದ ಕಡೆಗೆ, ಅರಾಜಕತೆಯಿಂದ ಉತ್ತಮ ಆಡಳಿತದತ್ತ ಸಾಗುತ್ತಿದೆ…’ ತಮ್ಮ ನೇತೃತ್ವದ ಸರಕಾರ 4 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಶನಿವಾರ ಒಡಿಶಾದ ಕಟಕ್ನಲ್ಲಿ ಪ್ರಧಾನಿ ಮೋದಿ ಆಡಿರುವ ಮಾತುಗಳಿವು.

ದೊಡ್ಡ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಸರಕಾರ ಹಿಂಜರಿಯಲಿಲ್ಲ. ಸರಕಾರ ಗೊಂದಲ ಕ್ಕೊಳಗಾಗದೇ ಬದ್ಧವಾಗಿದ್ದರೆ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಮ್ಮ ಸರಕಾರದ ಕಠಿನ ನಿರ್ಧಾರಗಳೇ ಜಿಎಸ್ಟಿ ಹಾಗೂ ಜನಧನದಂತಹ ಆರ್ಥಿಕ ಸುಧಾರಣೆ ಕ್ರಮಗಳಿಗೆ ಪ್ರೇರಕವಾಗಿದೆ. ಅಷ್ಟೇ ಅಲ್ಲ, ಸರಕಾರದ ಈ ಬದ್ಧತೆಯೇ ಸುಸ್ಥಿರ ವಿದೇಶಾಂಗ ನೀತಿಯನ್ನು ರೂಪಿಸಿದ್ದು. ಪಾಕಿಸ್ಥಾನದ ಮೇಲೆ ಸರ್ಜಿಕಲ್ ಸ್ಟೈಕ್ ನಡೆಸಲು ಸೇನೆಗೆ ಪೂರಕವಾದದ್ದು ಎಂದು ಮೋದಿ ಹೇಳಿದರು..

ವಿಪಕ್ಷಗಳ ಒಗ್ಗಟ್ಟು
ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಸರಕಾರದ ಕ್ರಮಗಳಿಂದಾಗಿ ಪರಸ್ಪರ ವಿರೋಧಿಗಳು ಸ್ನೇಹಿತರಾಗುತ್ತಿದ್ದಾರೆ. ಇಂಥ ಬಹಳಷ್ಟು ಶತ್ರುಗಳು ಪರಸ್ಪರ ಕೈ ಕೈ ಮಿಲಾಯಿಸಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಹಗರಣಗಳಲ್ಲಿ ಆರೋಪ ಹೊತ್ತಿರುವವರೂ ಒಂದಾಗುತ್ತಿದ್ದಾರೆ ಎಂದು ಕರ್ನಾಟಕದಲ್ಲಿ ಸಿಎಂ ಕುಮಾರ ಸ್ವಾಮಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿ ಸಿದ ವಿಪಕ್ಷಗಳನ್ನು ಉದ್ದೇಶಿಸಿ ಮೋದಿ ಟೀಕಿಸಿದರು.

4 ವರ್ಷಗಳ ಹಿಂದಿದ್ದ ಸಮಸ್ಯೆ ಈಗಿಲ್ಲ
4 ವರ್ಷಗಳ ಹಿಂದೆ ದೇಶ ಎದುರಿಸುತ್ತಿದ್ದ ಸಮಸ್ಯೆ ಗಳನ್ನು ಈ ಸಮಯದಲ್ಲಿ ನೆನಪು ಮಾಡಿಕೊಳ್ಳಬೇಕು. ಈ ಸಮಸ್ಯೆ ಆಗಲೇ ಪರಿಹಾರವಾಗಿದೆ ಎಂದರು.

ಬಡವರ ಪರ ಸರಕಾರ
ಎನ್ಡಿಎ ಸರಕಾರ ಬಡವರ ಪರ. ಬ್ಯಾಂಕ್ಗಳಲ್ಲಿ ಖಾತೆ ತೆರೆಯಲು ಬಡವರಿಗೆ ಅವಕಾಶವೇ ಇರಲಿಲ್ಲ. ಬಡವರ ಜೀವಕ್ಕೂ ಬೆಲೆಯಿದೆ ಹಾಗೂ ಅವರಿಗೂ ಜೀವ ವಿಮೆ ಬೇಕು ಎಂದು ಕಾಂಗ್ರೆಸ್ಗೆ ಯಾಕೆ ಎಂದೂ ಅನಿಸಲಿಲ್ಲ.

ನಕ್ಸಲರ ನಿರ್ಮೂಲನೆ
ದೇಶದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಸಂಖ್ಯೆ 126ರಿಂದ 90ಕ್ಕೆ ಇಳಿದಿದೆ. ಸರಕಾರ ರೂಪಿಸಿದ ಕಾರ್ಯತಂತ್ರದಿಂದಾಗಿ ಹೆಚ್ಚಿನ ನಕ್ಸಲರು ಶರಣಾಗಿ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಎಂದರು ಮೋದಿ.

4 ವರ್ಷಗಳ ಭ್ರಷ್ಟಚಾರ ರಹಿತ ಆಡಳಿತ: ಜೇಟ್ಲಿ
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಅನಂತರದ ಈ ನಾಲ್ಕು ವರ್ಷಗಳಲ್ಲಿ ಮೋದಿ ಸರಕಾರ, ಜನತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಶ್ಲಾಸಿದ್ದಾರೆ. ಕಿಡ್ನಿ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಅವರು, ಆಸ್ಪತ್ರೆಯಿಂದಲೇ ಫೇಸ್ಬುಕ್ನಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದು, ಇಡೀ ಲೇಖನ ಮೋದಿ ಆಡಳಿತದ ಪ್ರಶಂಸೆಗಷ್ಟೇ ಸೀಮಿತಗೊಳಿಸದೇ, ಅವರ ವಿರುದ್ಧದ ಟೀಕೆಗಳಿಗೂ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

“ಮೈ ರಿಫ್ಲೆಕ್ಷನ್ಸ್ ಆನ್ ದ ಎನ್ಡಿಎ ಗವರ್ನಮೆಂಟ್ 
ಆಫ್ಟರ್ ಕಂಪ್ಲೀಷನ್ ಆಫ್ ಫೋರ್ ಇಯರ್ಸ್ ಇನ್ ಪವರ್’ ಎಂಬ ಶೀರ್ಷಿಕೆಯ ಲೇಖನದಲ್ಲಿ, ಯುಪಿಎ ಸರಕಾರದ ಎಲ್ಲ ಭ್ರಷ್ಟಾಚಾರವನ್ನು ತೊಡೆದು ಹಾಕುವಲ್ಲಿ ಮೋದಿ ಸರಕಾರ ಯಶಸ್ವಿಯಾಗಿದೆ. ವಿತ್ತೀಯ ಕ್ಷೇತ್ರದಲ್ಲಿ ಮೋದಿ ಕೈಗೊಂಡ ಹಲವಾರು ಕ್ರಾಂತಿಕಾರಿ ಹೆಜ್ಜೆಗಳಿಂದಾಗಿ ಭಾರತ, ಮಂದಗತಿಯ ಆರ್ಥಿಕತೆಯ ದೇಶವೆಂಬ ಹಣೆಪಟ್ಟಿ ಕಳಚಿಕೊಂಡು, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶವನ್ನು ತೆರಿಗೆದಾರ ಸ್ನೇಹಿ ರಾಷ್ಟ್ರವನ್ನಾಗಿಸಿ ಎಲ್ಲರ ಮನ ಗೆದ್ದಿದ್ದಾರೆ ಎಂದು ಬರೆದಿದ್ದಾರೆ.

ನಿಮ್ಮ ನಿರೀಕ್ಷೆಗಳೇ ನನಗೆ ಸ್ಫೂರ್ತಿ
ಜನರ ನಿರೀಕ್ಷೆ, ಕನಸುಗಳೇ ನನಗೆ ಕೆಲಸ ಮಾಡಲು ಸ್ಫೂರ್ತಿ. ನಮ್ಮ ಸರಕಾರ ಜನಮತದ ಮೇಲೆ ನಡೆಯುತ್ತಿದೆ. ಜನಪಥದಿಂದ (ಸೋನಿಯಾ ಗಾಂಧಿಯ ಮನೆ ಹಾಗೂ ಕಚೇರಿ) ನಡೆಯುತ್ತಿಲ್ಲ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದರು.

ಸ್ವಚ್ಛ ಭಾರತ ಅಭಿಯಾನ
2014ರ ವೇಳೆಗೆ ದೇಶದ ಶೇ.39ರಷ್ಟು ಜನರಿಗೆ ಶೌಚಾಲಯಗಳಂತಹ ವ್ಯವಸ್ಥೆ ಇದ್ದವು. ಈಗ ಇದು ಶೇ. 80ಕ್ಕೆ ಏರಿದೆ. 2014ರ ವರೆಗೆ ದೇಶದಲ್ಲಿ 6 ಕೋಟಿ ಶೌಚಾಲಯ ನಿರ್ಮಿಸಲಾಗಿತ್ತು. ಕಳೆದ 4 ವರ್ಷಗಳಲ್ಲಿ 7.5 ಕೋಟಿ ಶೌಚಾಲಯ ನಿರ್ಮಿಸಲಾಗಿದೆ.

ಮೋದಿ ಆಯಪ್ನಲ್ಲಿ ರೇಟ್ ಮಾಡಿ
ನಾಲ್ಕು ವರ್ಷಗಳ ಆಡಳಿತ ಹೇಗಿತ್ತು ಎಂದು ರೇಟ್ ಮಾಡುವಂತೆ ಪ್ರಧಾನಿ ಮೋದಿ ಜನರಲ್ಲಿ ವಿನಂತಿಸಿದ್ದಾರೆ. ನರೇಂದ್ರ ಮೋದಿ ಆಯಪ್ ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, ಬಿಜೆಪಿ ನೇತೃತ್ವದ ಆಡಳಿತದ ಬಗ್ಗೆ, ಸಂಸದರು ಮತ್ತು ಶಾಸಕರ ಆಡಳಿತದ ಕಾರ್ಯಕ್ಷಮತೆಯನ್ನು ಜನರು ರೇಟ್ ಮಾಡ ಬಹುದು. ಸರಕಾರದ ಪ್ರಮುಖ ಯೋಜನೆಗಳನ್ನು ರೇಟ್ ಮಾಡುವುದು, ತಮ್ಮ ರಾಜ್ಯ ಹಾಗೂ ಕ್ಷೇತ್ರದ ಪ್ರಮುಖ ಮೂರು ಬಿಜೆಪಿ ನಾಯಕರನ್ನು ಪಟ್ಟಿ ಮಾಡುವುದು ಸಹಿತ ಹಲವು ಪ್ರಶ್ನೆಗಳು ಈ ಸಮೀಕ್ಷೆಯಲ್ಲಿವೆ.

ಜನಪ್ರಿಯತೆ ಮತ್ತು ರಾಜಕಾರಣ
ಉತ್ತಮ ರಾಜಕಾರಣಕ್ಕೆ ನಮ್ಮ ವ್ಯಾಖ್ಯಾನವೇ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಎಂಬುದು. ಜನರನ್ನು ವ್ಯವಸ್ಥೆ ಯೊಳಗೆ ತರುವತ್ತ ನಾವು ಸಾಗುತ್ತಿದ್ದೇವೆ. ಜನರಿಗೆ ಅನುಕೂಲ ಕಲ್ಪಿಸುವ ರಾಜಕಾರಣ ನಮ್ಮದು. ಕೇವಲ ಜನಪ್ರಿಯತೆಗಲ್ಲ ಎಂದು ಮೋದಿ ಹೇಳಿದರು.