‘ನೀವು ಔಷಧ ತೆಗೆದುಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀರಿ’ ಎಂದಾಗ ‘ಔಷಧ ತೆಗೆದುಕೊಳ್ಳುತ್ತಿದ್ದೀನಿ’ ಎಂದು ಭಗವದ್ಗೀತೆಯ ಪ್ರತಿ ತೋರಿಸಿದ ಆ ಮಹಾನ್ ನಾಯಕ ಯಾರು ಗೊತ್ತಾ..!??

ಬಂಕಿಮರಿಗೆ ಭಗವದ್ಗೀತೆ ಎಂದರೆ ದೈವಸ್ವರೂಪಿ. ಕೊನೆಗಾಲದಲ್ಲಿ ಅವರು ರೋಗದಿಂದ ಹಾಸಿಗೆ ಹಿಡಿದಿದ್ದಾಗ ವೈದ್ಯರು, ‘ನೀವು ಔಷಧ ತೆಗೆದುಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀರಿ’ ಎಂದಾಗ ಬಂಕಿಮರು ‘ಔಷಧ ತೆಗೆದುಕೊಳ್ಳುತ್ತಿದ್ದೀನಿ’ ಎನ್ನುತ್ತಾರೆ ಎಲ್ಲಿ ತೋರಿಸಿ ಎಂಬ ವೈದ್ಯರ ಮರುಪ್ರಶ್ನೆಗೆ ‘ಇದೋ ನೋಡಿ ಇಲ್ಲಿದೆ’ ಎಂದು ಪಕ್ಕದ ಮೇಜಿನ ಮೇಲಿನ ವಸ್ತುವನ್ನು ತೋರಿಸುತ್ತಾರೆ. ಅದು ಭಗವದ್ಗೀತೆಯ ಪ್ರತಿ!

ಅಷ್ಟಕು ಅವರು ಯಾರು ಗೊತ್ತಾ..!!

ಅವರು ಮತ್ಯಾರು ಅಲ್ಲ ‘ವಂದೇ ಮಾತರಂ’ ಗೀತೆಯು ಕೋಟಿ ಕೋಟಿ ಭಾರತೀಯರಲ್ಲಿ ದೇಶಪ್ರೇಮದ ಕೆಚ್ಚನ್ನು ತುಂಬಿ, ಹೋರಾಟಕ್ಕೆ ಪ್ರೇರೇಪಿಸಿ ಬ್ರಿಟಿಷರನ್ನು ಹೊರಗಟ್ಟಲು ಸ್ಪೂರ್ತಿ ತುಂಬಿದ ಮಂತ್ರ. ಇಂದಿಗೂ ಈ ನುಡಿ ದೇಶಭಕ್ತಿಯನ್ನು ಚಿಮ್ಮಿಸುತ್ತದೆ. ಈ ಗೀತೆ ರಚಿಸಿದ ಬಂಕಿಮಚಂದ್ರ ಚಟರ್ಜಿ.

ಇಂದಿಗೂ ಈ ಕ್ಷಣಕ್ಕೂ ಕೋಟಿ ಕೋಟಿ ಭಾರತೀಯರಲ್ಲಿ ಒಮ್ಮೆಲೆ ದೇಶಪ್ರೇಮವನ್ನು ಚಿಮ್ಮಿಸಿ, ಭಾವೋನ್ಮುಖರನ್ನಾಗಿ ಮಾಡಿ, ಕಣ್ಣ ಮುಂದೆ ಭಾರತಮಾತೆಯ ದಿವ್ಯ ಚಿತ್ರವನ್ನು ತಂದು ನಿಲ್ಲಿಸುವ, ನಮ್ಮ ಸಂವಿಧಾನ ‘ಜನ ಗಣ ಮನ’ದೊಂದಿಗೆ ರಾಷ್ಟ್ರಗೀತೆಯ ಸ್ಥಾನವನ್ನು ಇತ್ತಿರುವ ‘ವಂದೇ ಮಾತರಂ’ ಗೀತೆಯನ್ನು ನಮಗೆ ನೀಡಿರುವ ಬಂಕಿಮಚಂದ್ರ ಚಟರ್ಜಿಯವರನ್ನು ಕುರಿತು ಗುರುದೇವ ರವೀಂದ್ರನಾಥ ಟಾಗೋರರು ಹೇಳಿರುವ ಮಾತಿದು.

ಅವರ ಸಾಧನೆಯಿಂದ ರಾಷ್ಟ್ರೀಯತೆಯನ್ನು ಧರ್ಮದ ಎತ್ತರಕ್ಕೆ ಏರಿಸಿದ್ದು. ಧರ್ಮವಲ್ಲದೆ ಮತ್ತಾವುದೂ ಭಾರತೀಯ ಜನಮಾನಸವನ್ನು ಸೆಳೆಯಲಾರದೆಂಬ ಸತ್ಯವನ್ನು ಅರಿತವರು ಅವರು. ರಾಷ್ಟ್ರಭಕ್ತಿಯೇ ಅತ್ಯುಚ್ಚ ಧರ್ಮವೆಂದು ಸಾರಿದರು. ಮಾತೃಭೂಮಿ ಎಂದರೆ ದುರ್ಗೆ, ಲಕ್ಷ್ಮೀ, ಸರಸ್ವತಿಯರ ಸಾಕಾರ ರೂಪವೆಂದರು. ದೇವ ದೇವತೆಗಳೆಲ್ಲರ ಸಮುಚ್ಚಯವೇ ಮಾತೃಭೂಮಿ ಎಂದು ತಿಳಿಸಿ ಮೂರ್ತಿಪೂಜೆಗೆ ಒಂದು ಹೊಸ ತಿರುವು ಕೊಟ್ಟರು. ರಾಷ್ಟ್ರೀಯತೆಯ ಪರಮಧರ್ಮ ಎಂಬ ಅವರ ಈ ಸಮಗ್ರ ತತ್ತ್ವಜ್ಞಾನವನ್ನು ಅವರ ಪ್ರಸಿದ್ಧ ಕಾದಂಬರಿ ‘ಆನಂದ ಮಠ’ದಲ್ಲಿ ಕಾಣಬಹುದು. ಅದು ದೇಶಭಕ್ತರ ಶಾಶ್ವತ ಪಾರಾಯಣ ಗ್ರಂಥವಾಯಿತು.’

ಭಾರತದ ಭಾವಿ ಇತಿಹಾಸದ ಮೇಲೆ ‘ಆನಂದ ಮಠ’ ಮತ್ತು ‘ವಂದೇ ಮಾತರಂ’ ಬೀರಿರುವ ಪ್ರಭಾವ ಅಷ್ಟಿಷ್ಟಲ್ಲ. ಇಂದು ಕೂಡ ದೇಶಭಕ್ತ ಭಾರತೀಯರಲ್ಲಿ ಒಂದು ಸಮಗ್ರ ಭಾರತದ ಕಲ್ಪನೆ ಉಳಿದಿರುವಲ್ಲಿ ‘ಆನಂದ ಮಠ’ ಹಾಗೂ ‘ವಂದೇ ಮಾತರಂ’ಗಳೇ ಮೂಲ ಪ್ರೇರಣಾಸ್ರೋತು ಎಂಬುದು ಉತ್ಪ್ರೇಕ್ಷೆಯ ಮಾತಲ್ಲ.

ಬಂಕಿಮಚಂದ್ರ ಚಟರ್ಜಿ ಜೀವನ ..!!

1838ರ ಜೂನ್ 27ರಂದು ಬಂಗಾಳದ 24- ಪರಗಣ ಜಿಲ್ಲೆಗೆ ಸೇರಿದ ಕಾಂಟಾಲಪಾಡಾ ಗ್ರಾಮದಲ್ಲಿ ಬಂಕಿಮಚಂದ್ರರ ಜನನ. ಯಾಗ ನಡೆಸಿದ ಸಾಂಪ್ರದಾಯಕ ಮನೆತನದಲ್ಲಿ ಯಾದವಚಂದ್ರ ಚಟ್ಟೋಪಾಧ್ಯಾಯ ಹಾಗೂ ದುರ್ಗಾದೇವಿಯರ ಮಗ ಬಂಕಿಮರಿಗೆ ಮನೆಯ ವೈದಿಕ ಸಂಸ್ಕಾರ ಅವರನ್ನು ಋಷಿಯ ಮಟ್ಟಕ್ಕೆ ಏರಿಸಲು ಉತ್ತಮ ಅಡಿಪಾಯ ನಿರ್ವಿುಸಿತು. ತಂದೆ ಡೆಪ್ಯೂಟಿ ಕಮಿಷನರ್ ಆಗಿದ್ದವರು. ಬಂಕಿಮರಿಗೆ 19 ವಯಸ್ಸಾಗಿದ್ದಾಗ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಆಗ ಅವರು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿ. ಕ್ರಾಂತಿಯ ಅಪಾರ ಪರಿಣಾಮ ಕಲ್ಕತ್ತೆಯ ಮೇಲೆ ಬಿದ್ದು ಜನಜೀವನ ಅಲ್ಲೋಲಕಲ್ಲೋಲವಾಗಿತ್ತು. ತೀಕ್ಷ್ಣಬುದ್ಧಿಯ, ಜಾಗೃತ ಮನಸ್ಸಿನ ಯುವಕ ಬಂಕಿಮರಿಗೆ ಈ ಘಟನೆ ಚಿಂತನೆಗೆ ಗ್ರಾಸ ಒದಗಿಸಿತು.

ಇಪ್ಪತ್ತನೆಯ ವಯಸ್ಸಿಗೆ ಜಸ್ಸೂರ್ ಎಂಬಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿ ನೇಮಕ. 33 ವರ್ಷಗಳ ಸರ್ಕಾರಿ ನೌಕರಿ. ಅನಂತರ ನಿವೃತ್ತರಾಗಿ ಕೇವಲ ಮೂರು ವರ್ಷ ಬದುಕಿದ್ದು ಕಲ್ಕತ್ತಾದಲ್ಲಿ 56ನೆಯ ವಯಸ್ಸಿನಲ್ಲಿ ಅಸುನೀಗಿದರು. ಆದರೆ ಅಷ್ಟು ವರ್ಷಗಳಲ್ಲಿ ಅವರು ನಡೆಸಿದ ಸಾಹಿತ್ಯ ಕೃಷಿ ಎಂತಹುದು! ಇಂದಿಗೂ ಜೀವಂತವಾಗಿರುವ ‘ಆನಂದ ಮಠ’ ಮತ್ತು ‘ವಂದೇ ಮಾತರಂ’ಗಳೇ ಅವರ ಬಾಳಿನ ಸಾರ್ಥಕತೆಗೆ ಚಿರಂತನ ಸಾಕ್ಷಿ.

ಬಂಕಿಮಚಂದ್ರರ ಮೇಲೆ ಕನ್ನಡದಲ್ಲಿ ದೊಡ್ಡ ಗ್ರಂಥ ಬರೆದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಬಂಕಿಮಚಂದ್ರ’ ಕೃತಿಯ ಲೇಖಕ ಎ.ಆರ್. ಕೃಷ್ಣಶಾಸ್ತ್ರಿಗಳು, ‘ಬಂಕಿಮರ ಐತಿಹಾಸಿಕ ಕಾದಂಬರಿಗಳಾದ ಆನಂದ ಮಠ, ದೇವಿ ಚೌಧುರಾಣಿ, ಸೀತಾರಾಮ ಇವುಗಳಲ್ಲಿ ಭಗವದ್ಗೀತೆಯಲ್ಲಿ ಉಕ್ತವಾದ ಆದರ್ಶ, ಧರ್ಮ, ಕರ್ಮ, ಸಂನ್ಯಾಸಗಳು ಪ್ರಮುಖವಾಗಿವೆ’ ಎಂದು ಹೇಳಿ ಆ ಕಾದಂಬರಿಗಳ ತಾತ್ತಿ್ವಕ ತಳಹದಿಯನ್ನು ಗುರುತಿಸಿದ್ದಾರೆ.

ಬಂಕಿಮರಿಗೆ ಭಗವದ್ಗೀತೆ ಎಂದರೆ ದೈವಸ್ವರೂಪಿ. ಕೊನೆಗಾಲದಲ್ಲಿ ಅವರು ರೋಗದಿಂದ ಹಾಸಿಗೆ ಹಿಡಿದಿದ್ದಾಗ ವೈದ್ಯರು, ‘ನೀವು ಔಷಧ ತೆಗೆದುಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀರಿ’ ಎಂದಾಗ ಬಂಕಿಮರು ‘ಔಷಧ ತೆಗೆದುಕೊಳ್ಳುತ್ತಿದ್ದೀನಿ;’ ಎನ್ನುತ್ತಾರೆ. ಎಲ್ಲಿ ತೋರಿಸಿ ಎಂಬ ವೈದ್ಯರ ಮರುಪ್ರಶ್ನೆಗೆ ‘ಇದೋ ನೋಡಿ ಇಲ್ಲಿದೆ’ ಎಂದು ಪಕ್ಕದ ಮೇಜಿನ ಮೇಲಿನ ವಸ್ತುವನ್ನು ತೋರಿಸುತ್ತಾರೆ. ಅದು ಭಗವದ್ಗೀತೆಯ ಪ್ರತಿ!

‘ವಂದೇಮಾತರಂ’ ಗೀತೆ ನಮಗೆ ‘ಆನಂದ ಮಠ’ದಲ್ಲಿ ದೊರೆತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಹೇಗೆ ಹುಟ್ಟಿತು? ಅದಕ್ಕೆ ಕನ್ನಡ ಕಾದಂಬರಿ ಸಾರ್ವಭೌಮ ಅ.ನ.ಕೃ. ತಮ್ಮ ಬಂಗಾಳಿ ಮಿತ್ರರೊಬ್ಬರಿಂದ ಕೇಳಿ ತಿಳಿಸಿದ ವಿವರ ಹೀಗಿದೆ: ತುಂಬು ಬೆಳದಿಂಗಳ ಒಂದು ರಾತ್ರಿ ಬಂಕಿಮರೂ ಅವರ ಸೋದರಳಿಯನೂ ಮನೆಯ ಬಿಸಿಲು ಮಚ್ಚಿನ ಮೇಲೆ ಮಲಗಿದ್ದಾಗ ಮಧ್ಯರಾತ್ರಿ ನಿದ್ರೆಯಿಂದ ದಿಢೀರನೆ ಎದ್ದು ಕುಳಿತ ಬಂಕಿಮರು ಕಣ್ಣೀರಧಾರೆ ಹರಿಸುತ್ತಾ ಮಂತ್ರ ಹೇಳಿದಂತೆ ಬಾಯಿಂದ ಪಠಿಸುತ್ತಿದ್ದರಂತೆ. ಅವರ ಬಾಯಿಂದ ಬಂದುದನ್ನು ಬರೆದಿಡುವ ಪದ್ಧತಿ ಇಟ್ಟುಕೊಂಡಿದ್ದ ಸೋದರಳಿಯ ಕೂಡಲೇ ಅದನ್ನು ಲಿಪಿಬದ್ಧಗೊಳಿಸಿ ಬೆಳಗ್ಗೆ ಮಾವನ ಕೈಯಲ್ಲಿಟ್ಟನಂತೆ. ಅದರ ಮೇಲೆ ಕಣ್ಣಾಡಿಸಿದ ಬಂಕಿಮರು ಭಾವಗರ್ಭಿತರಾಗಿ, ‘ನನ್ನ ಸಾಹಿತ್ಯ ಸಂಪತ್ತನ್ನೆಲ್ಲ ಗಂಗಾ ಸಾಗರಕ್ಕೆ ಹಾಕಿದರೂ ಚಿಂತೆ ಇಲ್ಲ. ಇದು ಎಲ್ಲ ಕಾಲಕ್ಕೂ ಚಿರಸ್ಥಾಯಿಯಾಗಿರುತ್ತದೆ. ಮಹಾನ್ ಗೀತೆಯಾಗಿ ದೇಶದ ಹೃನ್ಮನ ಗೆಲ್ಲುತ್ತದೆ’ ಎಂದರಂತೆ.

ಬಂಕಿಮಚಂದ್ರರ ವೈಚಾರಿಕತೆಯ ಉತ್ತರಾಧಿಕಾರಿಯೂ ಸ್ವಾಮಿ ವಿವೇಕಾನಂದರ ಕಿರಿಯ ಗೆಳೆಯರೂ ಆದ ಮಹರ್ಷಿ ಅರವಿಂದ ಘೊಷರು ‘ಆನಂದ ಮಠ’ದಿಂದ ಸ್ಪೂರ್ತಿ ಪಡೆದು ‘ಭವಾನಿ ಮಂದಿರ’ದ ಪರಿಕಲ್ಪನೆಯನ್ನು ಪುಸ್ತಿಕೆಯ ರೂಪದಲ್ಲಿ ಅಂದಿನ ಯುವಕರ ಕೈಗೆ ನೀಡಿ ಬಂಗಾಳ ಹಾಗೂ ದೇಶದ ಇತರೆಡೆಗಳಲ್ಲಿ ನಡೆದ ಕ್ರಾಂತಿ ಚಟುವಟಿಕೆಗಳಿಗೆ ದಾರಿ ತೋರಿದರು.

‘ಭವಾನಿ ಮಂದಿರ’ದ ಪರಿಕಲ್ಪನೆ ‘ಆನಂದ ಮಠ’ದ ಕಾರ್ಯರೂಪಿ ನೀಲನಕ್ಷೆ. ಅದರ ಸಾರಾಂಶದ ಒಂದು ಭಾಗ ಹೀಗಿದೆ: ‘…ಸ್ವಾತಂತ್ರ್ಯ ಹೋರಾಟಕ್ಕೆ ತಕ್ಕ ಯೋಧರಾಗಲು ಮೊದಲು ಶಕ್ತಿದೇವತೆಯನ್ನು ಒಲಿಸಿಕೊಳ್ಳಬೇಕು… ಸುಭದ್ರ ಧರ್ಮದ ಆಧಾರದ ಮೇಲೆ ಹೋರಾಟ ನಡೆಸಬೇಕು. ನಗರಗಳ ಹೊಲಸಿನಿಂದ ದೂರವಾದ ಪ್ರಕೃತಿಯ ಪವಿತ್ರ ಮಡಿಲಲ್ಲಿ ಭವಾನಿ ಅಥವಾ ಕಾಳಿ ಮಂದಿರಗಳನ್ನು ಸ್ಥಾಪಿಸಬೇಕು. ತಾಯಿಗಾಗಿ ಸರ್ವಸ್ವವನ್ನೂ ಒಪ್ಪಿಸಲು ಸದಾ ಸಿದ್ಧರಿರುವ ಕರ್ಮಯೋಗಿಗಳ ಹೊಸದೊಂದು ದೊಡ್ಡ ಪಂಥವನ್ನೇ ಕಟ್ಟಬೇಕು. ಈ ಹೊಸ ಪಂಥದ ಅಧಿಷ್ಠಾನದಲ್ಲಿ ಯಾವುದೇ ದೌರ್ಬಲ್ಯಕ್ಕೆ ಅವಕಾಶ ಇರಕೂಡದು. ಇದರಲ್ಲಿನ ರಾಷ್ಟ್ರಭಕ್ತರು ಸಂನ್ಯಾಸಿಗಳಾಗದೆಯೇ ಇರಬಹುದು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಬ್ರಹ್ಮಚಾರಿಗಳಿರಬೇಕು. ಭಾರತ ಸ್ವಾತಂತ್ರ್ಯ ಗುರಿ ಸಾಧನೆಯಾದ ಮೇಲೆ ಬೇಕಾದರೆ ಗೃಹಸ್ಥರಾಗಬಹುದು. ಭಾರತವು ಹಿಂದೆಂದಿಗಿಂತಲೂ ಉನ್ನತ ಸ್ಥಾನಕ್ಕೇರುವಂತೆ ಪ್ರಯತ್ನಿಸುವುದು ಪ್ರತಿ ಭಾರತೀಯನ ಆದ್ಯ ಕರ್ತವ್ಯ.’

ರಾಮಕೃಷ್ಣ ಪರಮಹಂಸರ ಪರಮಭಕ್ತರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಬಂಕಿಮರು. ರಾಮಕೃಷ್ಣರು ಬಂಕಿಮರ ಕಾದಂಬರಿಗಳನ್ನು ತಮ್ಮ ಶಿಷ್ಯರಿಂದ ಓದಿಸಿ ಕೇಳಿದ್ದುಂಟು. 1884ರ ಡಿಸೆಂಬರ್​ನಲ್ಲಿ ಒಬ್ಬ ಭಕ್ತರ ಮನೆಯಲ್ಲಿ ಅವರಿಬ್ಬರ ಭೇಟಿಯಾದಾಗ ತಮ್ಮನ್ನು ಬಂಕಿಮಚಂದ್ರ ಎಂದು ಪರಿಚಯಿಸಿಕೊಂಡರು. ತುಸು ತಮಾಷೆ ಹಾಗೂ ಚೇಷ್ಟೆಯ ದನಿಯಲ್ಲಿ ಪರಮಹಂಸರು ‘ಬಂಕಿಮ! ಅಂದರೆ ಬಾಗಿರುವುದು ಎಂದರ್ಥ. ಯಾವುದು ನಿನ್ನನ್ನು ಬಗ್ಗಿಸಿತು?’ ಎಂದು ಛೇಡಿಸಿದರು. ಥಟ್ಟನೆ ಬಂಕಿಮರ ಬಾಯಿಂದ ಬಂತು ‘ಬ್ರಿಟಿಷರ ಬೂಟುಕಾಲಿನ ಒದೆತ!’ ಇಡೀ ದೇಶಕ್ಕಾಗಿದ್ದ ಸ್ಥಿತಿಯನ್ನು ಈ ಒಂದು ವಾಕ್ಯದಲ್ಲಿ ಅರ್ಥಪೂರ್ಣವಾಗಿ ತಿಳಿಸಿದ್ದರು ಅವರು.

ಒಟ್ಟು ಹದಿನಾಲ್ಕು ಕಾದಂಬರಿಗಳನ್ನು ಬರೆದ ಬಂಕಿಮರನ್ನು ಆಂಗ್ಲ ಲೇಖಕ ಎಡ್ವರ್ಡ್ ಥಾಮ್ಸನ್ ‘ಬಂಗಾಳದ ಸರ್ ವಾಲ್ಟರ್ ಸ್ಕಾಟ್’ ಎಂದು ಕರೆದಾಗ ಅರವಿಂದರು, ‘ಅಭೂತಪೂರ್ವ ವಿಚಾರ ಸಂಪತ್ತು ಮಾತ್ರವಲ್ಲದೆ ಪರಿಪಕ್ವ ಅಭಿವ್ಯಕ್ತಿಯ ಸಾಮರ್ಥ್ಯವನ್ನು ಸಾಧಿಸಿದ ಕಾದಂಬರಿಕಾರನೊಬ್ಬನನ್ನು, ಹೆಜ್ಜೆ ಹೆಜ್ಜೆಗೂ ಎಡವಿ ಮುಗ್ಗರಿಸುವ ಸ್ಕಾಟ್ಲೆಂಡಿನ ಅಪಕ್ವ ಲೇಖಕನ ನಕಲೆಂದು ಒಪ್ಪಿಕೊಳ್ಳುವುದು ಸರ್ವಥಾ ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದ್ದರು.

ರೋಗಗ್ರಸ್ತರಾಗಿ ಹಾಸಿಗೆ ಹಿಡಿದಿದ್ದ ಬಂಕಿಮರು 1894ರ ಏಪ್ರಿಲ್ 8ರಂದು ಅಸುನೀಗಿದಾಗ ಅರವಿಂದ ಘೊಷರು ಮುಂಬೈನ ‘ಇಂದು ಪ್ರಕಾಶ’ದಲ್ಲಿ ಹೀಗೆ ಬರೆದರು: ‘….ಯಾರು ಪದವಿ ಪ್ರತಿಷ್ಠೆಗಳನ್ನಾಗಲೀ ಅಧಿಕಾರವನ್ನಾಗಲೀ ಬಯಸದೆ ನಿಸರ್ಗದಂತೆ ನಿಶ್ಶಬ್ದವಾಗಿ ತನ್ನ ಪಾಲಿನ ಕೆಲಸ ಮಾಡಿದನೋ, ಯಾರಿಗೆ ತನ್ನಲ್ಲಿದ್ದ ಅತ್ಯುತ್ತಮವಾದುದನ್ನು ಅರ್ಪಿಸುವುದರ ವಿನಾ ಬೇರೊಂದು ಉದ್ದೇಶವಿರಲಿಲ್ಲವೋ ಅಂಥ ಯಾವೊಬ್ಬನು ತನ್ನ ಬರವಣಿಗೆಯ ಮೂಲಕ ತನ್ನ ಭಾಷೆ, ಸಾಹಿತ್ಯ ಹಾಗೂ ರಾಷ್ಟ್ರವನ್ನು ಪ್ರಭಾವಿಯಾಗಿ ಅಭಿವ್ಯಕ್ತಿಸಲು ಸಾಧ್ಯವಾಯಿತೋ ಅಂಥ ಉದಾತ್ತ ಪುರುಷನ ಪ್ರಶಾಂತ ಲಲಾಟವನ್ನು ಭಾರತದ ಭಾವಿ ಜನಾಂಗವು ತನ್ನ ಅತ್ಯಮೂಲ್ಯವೆಂಬ ಪ್ರಶಸ್ತಿಯಿಂದ ಅಲಂಕರಿಸುತ್ತದೆ.’

ಗಂಗೆ ಗಂಗೋತ್ರಿಯಲ್ಲಿ ಹುಟ್ಟಿ ಸಣ್ಣದಾಗಿ ಹರಿಯುತ್ತಾಳೆ. ಬರಬರುತ್ತಾ ವೇಗ ಹೆಚ್ಚುತ್ತದೆ. ಹೃಷಿಕೇಶದಲ್ಲಿ ಭಯಂಕರ ರಭಸದಿಂದ ಹರಿಯುತ್ತಾಳೆ. ಕಾಶಿಗೆ ಬರುವ ವೇಳೆಗೆ ಇನ್ನೂ ಹೆಚ್ಚು. ಸಮುದ್ರ ಸೇರುವ ವೇಳೆಗೆ ಅದರದು ಬೃಹತ್ ರೂಪ, ಮಹಾನ್ ರಭಸ. ಹಾಗೆಯೇ ‘ಆನಂದ ಮಠ’ದಲ್ಲಿ ಕಾಣಿಸಿಕೊಂಡ ‘ವಂದೇ ಮಾತರಂ’ ಗೀತೆ ಕಾಲ ಸಂದಂತೆ ಕೋಟಿ ಕೋಟಿ ಭಾರತೀಯರಲ್ಲಿ ಹೋರಾಟದ ಕೆಚ್ಚನ್ನು ತುಂಬಿ ಕೊನೆಗೆ ಬ್ರಿಟಿಷರನ್ನು ಭಾರತದಿಂದ ಹೊರಗಟ್ಟಿದ ಮಂತ್ರವಾಯಿತು. ಅಂಥ ರಾಷ್ಟ್ರಮಂತ್ರ ನೀಡಿದ ಬಂಕಿಮಚಂದ್ರ ಚಟರ್ಜಿ.

‘ವಂದೇ ಮಾತರಂ’ ಗೀತೆ ಕೇಳಿದರೆ ಸಾಕು ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟುವಂತಹ ಹಾಡನ್ನು ಬರೆದ ಬಂಕಿಮಚಂದ್ರ ಚಟರ್ಜಿ ಅವರಿಗೆ ಇಂದು ಪುಣ್ಯಸ್ಮರಣೆ……

Post Author: Ravi Yadav