ನಡೆದಾಡುವ ದೇವರು ಶಿವಕುಮಾರ ಸ್ವಾಮಿರವರ ಸಮಾಜ ಸೇವೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು ಮನವಿ..!

ನಡೆದಾಡುವ ದೇವರು ಶಿವಕುಮಾರ ಸ್ವಾಮಿರವರ ಸಮಾಜ ಸೇವೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು ಮನವಿ..!

0

ಕರ್ನಾಟಕ ರತ್ನ ಡಾ|| ಶ್ರೀ.ಶಿವಕುಮಾರ ಸ್ವಾಮಿಗಳು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು. ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. 12ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು.

ಮಾರ್ಚ್ 3, 1930ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಸ್ವಾಮಿ ಜಿ ಗಳು ಭಾರತದ ಮುಂದಿನ ಯುವ ಪೀಳಿಗೆಗೆ ದಾರಿದೀಪವಾಗಿ ಹಾಗು ದೇಶಕ್ಕೆ ಒಳ್ಳೆಯ ಸಂದೇಶವನ್ನ ಸಾರುತ್ತಿರುವ ಸ್ವಾಮೀಜಿ.

ಶಿಕ್ಷಣಕ್ಕೆ ಶಿವಕುಮಾರ ಸ್ವಾಮಿ ಅವರ ಕೊಡುಗೆ ಅಪಾರ.!!

ಬಡ ವಿದ್ಯಾರ್ಥಿಗಳಿಗೆ ದೇವರ ರೂಪದಲ್ಲಿ ಸಿಕ್ಕಿರುವ ಸ್ವಾಮಿ ಜಿ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆ.ಪ್ರಾಥಮಿಕ ಶಾಲೆ , ಪ್ರೌಢ ಶಾಲೆ ಇಂಜಿನಿಯರಿಂಗ್ ಕಾಲೇಜು, ಡಿಗ್ರಿ ಕಾಲೇಜು ಹೀಗೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ನಡೆಸುತಿದ್ದಾರೆ.

ಸಿದ್ಧಗಂಗೆಯಲ್ಲಿ ಸಂಸ್ಕೃತ ಪಾಠ ಶಾಲೆಯಿಂದ ಆರಂಭವಾದ ಶಿಕ್ಷಣ ಯಜ್ಞ ನಿರಂತರವಾಗಿ ಮುಂದುವರಿದಿದೆ. ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಮಹಾವೃಕ್ಷವಾಗಿ ಬೆಳೆದಿದೆ. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಶೈಕ್ಷಣಿಕ ಅಭಿಯಾನ ಸಾಗಿದೆ. ಮಠದಲ್ಲಿ ಎಲ್ಲ ಜಾತಿಗೆ ಸೇರಿದ 10 ಸಾವಿರಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ.

ಮಠದ ಮಕ್ಕಳಿಗೆ ಮಾತೃಪ್ರೀತಿ ತೋರುವ ಶ್ರೀಗಳು ಶಿಕ್ಷಣದ ಜತೆಗೆ ಸಂಸ್ಕೃ, ಸಂಸ್ಕಾರವನ್ನು ಹೇಳಿಕೊಡುತ್ತಿದ್ದಾರೆ. 130 ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಅಭಿಯಾನವನ್ನೇ ನಡೆಸುತ್ತಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆಯನ್ನೇ ನಿರ್ವಿುಸಿದ್ದಾರೆ.

‘ಒಂದು ತುತ್ತು ಅನ್ನದ ಹಿಂದೆ ಸಾವಿರಾರು ಮಂದಿಯ ಶ್ರಮದ ಶಕ್ತಿಯ ಸಾಗರವೇ ನಿಂತಿದೆ. ಅದನ್ನು ಅರಿತಾಗಲೇ ಮನುಷ್ಯ ಮನುಷ್ಯನಾಗುವುದು’ ಎಂಬ ಶ್ರೀಗಳ ಮಾತು ಮಠದ ವಿದ್ಯಾರ್ಥಿನಿಲಯಗಳಲ್ಲಿ ಆಶ್ರಯ ಪಡೆದಿರುವ, ಅದರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಲಕ್ಷಾಂತರ ವಿದ್ಯಾರ್ಥಿಗಳ ಮನದಾಳಕ್ಕಿಳಿದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ.

ಶ್ರೀಗಳು ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಕ್ರಾಂತಿ ಮಾಡಿದ ‘ಲೋಕಜಂಗಮ’. ಸೂರ್ಯನೇ ನಾಚುವಂತೆ ನಸುಕಿನಲ್ಲೇ ಎದ್ದು ರಾತ್ರಿ 11ರವರೆಗೂ ತಪೋನುಷ್ಠಾನ ಮತ್ತಿತರ ಕಾಯಕದಲ್ಲಿ ತಲ್ಲೀನರಾಗುವ ಡಾ.ಶಿವಕುಮಾರ ಶ್ರೀಗಳದ್ದು ಸಾರ್ಥಕ ಬದುಕು.

ಇಂತಹ ಅಪರೂಪದ ಕಾಯಕ ಯೋಗಿಯನ್ನು ‘ಭಾರತ ರತ್ನ’ ಪ್ರಶಸ್ತಿಯನ್ನು ಕೊಡಬೇಕು ಎಂಬುದೇ ಎಲ್ಲರ ಆಶಯ.

-ಕರುನಾಡ ವಾಣಿ ತಂಡ