ಮೋದಿ ಮೋಡಿ: ಮೇಘಾಲಯದಲ್ಲಿ ಬಿಜೆಪಿ ಎರಡೇ ಸ್ಥಾನ ಗೆದ್ರು ಅಧಿಕಾರಕ್ಕೆ..!!

ಮೋದಿ ಮೋಡಿ: ಮೇಘಾಲಯದಲ್ಲಿ ಬಿಜೆಪಿ ಎರಡೇ ಸ್ಥಾನ ಗೆದ್ರು ಅಧಿಕಾರಕ್ಕೆ..!!

0

ಹಿಂದೆ ಗೋವಾದಲ್ಲಿ ಕಡಿಮೆ ಸ್ಥಾನ ಸಿಕ್ಕಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಈಗ ಅದೇ ತಂತ್ರವನ್ನು ಬಳಸಿ ಮಿತ್ರ ಪಕ್ಷಗಳನ್ನು ಸೆಳೆದು ಮೇಘಾಲಯದಲ್ಲೂ ಅಧಿಕಾರದ ಗದ್ದುಗೆ ಏರಲು ಮುಂದಾಗಿದೆ.

ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವುದರಿಂದ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತೇವೆ. ಬಹುಮತ ಸಾಬೀತು ಪಡಿಸಲು ಅನುಮತಿ ನೀಡಿ ಎಂದು ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‍ಪಿಪಿ) ಅಧ್ಯಕ್ಷ ಕೊನ್ರಾಡ್ ಸಂಗ್ಮಾ ರಾಜ್ಯಪಾಲರಲ್ಲಿ ಅನುಮತಿ ಕೇಳಿದ್ದಾರೆ.

ಮೇಘಾಲಯದ ಒಟ್ಟು 59 ಸ್ಥಾನಗಳಲ್ಲಿ ಕಾಂಗ್ರೆಸ್ 21, ಎನ್‍ಪಿಪಿ 17, ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಇತರ ಪಕ್ಷಗಳ 19 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಸರಳ ಬಹುಮತಕ್ಕೆ 30 ಸ್ಥಾನಗಳ ಅಗತ್ಯವಿದ್ದು, ಯುನೈಟೆಡ್ ಡೆಮಾಕ್ರೆಟಿಕ್ ಪಾರ್ಟಿಯ 6 ಮಂದಿ ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿಯ 2 ಮಂದಿ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ. ಮಾರ್ಚ್ 6ರ ಬೆಳಗ್ಗೆ 10 ಗಂಟೆಗೆ ಕೊನ್ರಾಡ್ ಸಂಗ್ಮಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಮೇಘಾಲಯದಲ್ಲಿ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಏರಲಿದ್ದು ನಾವು ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದರು. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರದ ಅನುದಾನದ ಪಾಲು ಹೆಚ್ಚು. ಹೀಗಾಗಿ ಮೇಘಾಲಯದಲ್ಲಿ ಕಾಂಗ್ರೆಸ್ಸಿಗೆ ಉಳಿದ ಪಕ್ಷಗಳು ಬೆಂಬಲ ನೀಡುವುದು ಕಷ್ಟ ಎನ್ನುವ ವಿಶ್ಲೇಷಣೆ ಶನಿವಾರವೇ ಪ್ರಕಟವಾಗಿತ್ತು. ಮಣಿಪುರ ಹಾಗೂ ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ, ಅಲ್ಲಿನ ಸಣ್ಣಪುಟ್ಟ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳ ನೆರವಿನಿಂದ ಸರ್ಕಾರ ರಚಿಸುವುಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮೈತ್ರಿ ಸರ್ಕಾರ ರಚನೆ ಕುರಿತು ಮೇಘಾಲಯದ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಮೇಘಾಲಯಕ್ಕೆ ತೆರಳುವಂತೆ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಮೇಘಾಲಯದಲ್ಲಿ ಅತಿ ಹೆಚ್ಚು ಸ್ಥಾನ ಸಿಕ್ಕಿದ ಕೂಡಲೇ ಕಾಂಗ್ರೆಸ್ ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಹಾಗೂ ಕಮಲ್ ನಾಥ್ ಅವರೂ ಮೇಘಾಲಯಕ್ಕೆ ಆಗಮಿಸಿದ್ದರು. ಅತಂತ್ರ ಸ್ಥಿತಿಯಲ್ಲೂ ತನ್ನ ತಂತ್ರಗಾರಿಕೆ ಬಳಸಿ ಮಿತ್ರ ಪಕ್ಷಗಳನ್ನು ತನ್ನತ್ತ ಸೆಳೆಯುವಲ್ಲಿ ಬಿಜೆಪಿ ಕೊನೆಗೂ ಯಶಸ್ವಿಯಾಗಿದೆ.