13 ಡಿಜಿಟ್‍ಗೆ ಮೊಬೈಲ್ ನಂಬರ್ ಬದಲಾಗಲ್ಲ – ದಯವಿಟ್ಟು ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ..!!

13 ಡಿಜಿಟ್‍ಗೆ ಮೊಬೈಲ್ ನಂಬರ್ ಬದಲಾಗಲ್ಲ – ದಯವಿಟ್ಟು ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ..!!

0

 

ನವದೆಹಲಿ: “ಜುಲೈ 1ರಿಂದ 10 ಸಂಖ್ಯೆಯ ಮೊಬೈಲ್ ನಂಬರ್ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಬೇಕು. 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಎಲ್ಲ ಟೆಲಿಕಾಂ ಕಂಪೆನಿಗಳಿಗೆ ದೂರ ಸಂಪರ್ಕ ಸಚಿವಾಲಯ ಇಲಾಖೆ ಆದೇಶ ನೀಡಿದೆ”

ಈ ಮೇಲಿನ ವಾಕ್ಯಗಳಿರುವ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ, ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ದಯವಿಟ್ಟು ಯಾರು ಈ ಸಂದೇಶವನ್ನು ಶೇರ್ ಮಾಡಬೇಡಿ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರೂ ಗಾಬರಿಯಾಗಿ ಗೊಂದಲಕ್ಕೆ ಬೀಳಬೇಡಿ. ಮೊಬೈಲ್ ಸಂಖ್ಯೆಗಳು ಈಗ ಹೇಗೆ 10 ಸಂಖ್ಯೆಗಳು ಇದೆಯೋ ಅದು ಹಾಗೆಯೇ ಮುಂದುವರಿಯುತ್ತದೆ.

ಸರಿ ಹಾಗಾದ್ರೆ ಯಾವುದಕ್ಕೆ 13 ನಂಬರ್?

ದೂರಸಂಪರ್ಕ ಇಲಾಖೆಯ (ಡಿಓಟಿ) ಆದೇಶ ಮೆಷಿನ್ ಟು ಮೆಷಿನ್(ಎಂ2ಎಂ) ಸಿಮ್ ಗಳಿಗೆ ಮಾತ್ರ ಸೀಮಿತವಾಗಿದ್ದು ಪೀರ್ ಟು ಪೀರ್(ಪಿ2ಪಿ) ಸಿಮ್ ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಸುಳ್ಳು ಸುದ್ದಿ ಪ್ರಕಟವಾಗುತ್ತಿದ್ದಂತೆ ಟೆಲಿಕಾಂ ಕಂಪೆನಿಗಳಾದ ಏರ್‍ಟೆಲ್, ರಿಲಯನ್ಸ್ ಜಿಯೋ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಯಾವುದೇ ಕಾರಣಕ್ಕೂ ಗ್ರಾಹಕರ ನಂಬರ್ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದೆ.

ಏನಿದು ಎಂ2ಎಂ?

ಸುಲಭವಾಗಿ ಸರಳವಾಗಿ ಹೇಳುವುದಾದರೆ ದೂರದಲ್ಲಿರುವ ಯಂತ್ರಗಳನ್ನು ನಿಮ್ಮ ಮೊಬೈಲ್ ಮೂಲಕವೇ ನಿಯಂತ್ರಿಸಬಹುದಾದ ವ್ಯವಸ್ಥೆ. ವೈರ್‌ಲೆಸ್‌ ಮೂಲಕ ಎರಡು ಸಾಧನಗಳನ್ನು ಪರಸ್ಪರ ಕೆಲಸಕ್ಕಾಗಿ ಜೋಡಿಸುವ ಹೊಸ ಪೀಳಿಗೆಯ ತಂತ್ರಜ್ಞಾನವೇ ಎಂ2ಎಂ. ಕಾರುಗಳು, ವಿದ್ಯುತ್ ಮೀಟರ್, ಸ್ವೈಪಿಂಗ್ ಯಂತ್ರಗಳಿಗೆ ಎಂ2ಎಂ ಸಂಖ್ಯೆಗಳಿರುವ ಸಿಮ್ ಗಳನ್ನು ನೀಡಲಾಗುತ್ತದೆ.

ಡಿಓಟಿ ಆದೇಶದಲ್ಲಿ ಏನಿದೆ?

ಪ್ರಸ್ತುತ ಇರುವ 10 ಅಂಕಿಗಳ ಸಂಖ್ಯೆಯಿಂದ 13 ಅಂಕಿಗಳ ಸಂಖ್ಯೆಗೆ ಬದಲಾವಣೆ ಪ್ರಕ್ರಿಯೆ 2018ರ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, ಡಿಸೆಂಬರ್ 31ರೊಳಗೆ ಪೂರ್ಣಗೊಳ್ಳಬೇಕಿದೆ. 2018ರ ಜುಲೈ 1ರಿಂದ ವಿತರಣೆಯಾಗಲಿರುವ ಎಲ್ಲ ಹೊಸ ಎಂ2ಎಂ ಸಂಖ್ಯೆಗಳು 13 ಅಂಕಿಗಳದ್ದಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

ಸುಳ್ಳು ಸುದ್ದಿ ಪ್ರಸಾರ ಆಗಿದ್ದು ಹೇಗೆ?

ಮೆಷಿನ್ ಟು ಮೆಷಿನ್(ಎಂ2ಎಂ)ಗಳಿಗೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದ್ದರೂ ಇದೂ ಪೀರ್ ಟು ಪೀರ್(ಪಿ2ಪಿ) ಗ್ರಾಹಕರಿಗೂ ಅನ್ವಯವಾಗುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಪ್ರಕಟಿಸಿದ್ದರಿಂದ ಸುಳ್ಳು ಸುದ್ದಿ ಈಗ ಸೃಷ್ಟಿಯಾಗಿದೆ.

ಎಂ2ಎಂ ತಂತ್ರಜ್ಞಾನ ಹೇಗೆ ಭಿನ್ನ?

ಈಗ ನೀವು ನಿಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಹಾಕಿದ್ದೀರಿ ಎಂದು ಭಾವಿಸಿಕೊಳ್ಳಿ. ಕ್ಯಾಮೆರಾ ತನ್ನ ಮುಂದುಗಡೆ ಏನು ನಡೆಯುತ್ತಿರುತ್ತದೋ ಆ ಎಲ್ಲ ದೃಶ್ಯಗಳನ್ನು ಮಾತ್ರ ಸೆರೆಹಿಡಿಯುತ್ತದೆ. ಅಂದರೆ ಸಿಸಿ ಕ್ಯಾಮೆರಾ ನಿಮ್ಮ ಮನೆಗೆ ನುಗ್ಗಿದ ಕಳ್ಳನ ಚಲನವಲನಗಳನ್ನು ಸೆರೆ ಹಿಡಿಯಬಹುದೇ ವಿನಾಃ ಕಳ್ಳತನವನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಎಂ2ಎ ತಂತ್ರಜ್ಞಾನದಲ್ಲಿ ಕಳ್ಳತನವನ್ನು ತಡೆಯಬಹುದು. ಹೌದು. ಎಂ2ಎಂ ಅಪ್ಲಿಕೇಶನ್ ಆಧಾರಿತ ಕ್ಷೇತ್ರದಲ್ಲಿ ಮೊಬೈಲ್ ಫೋನ್‍ ನಲ್ಲಿರುವ ಒಂದು ಬಟನ್ ಕ್ಲಿಕ್ ಮಾಡಿ ದೂರದಲ್ಲಿರುವ ಯಂತ್ರಗಳನ್ನು ನಿಯಂತ್ರಿಸಿ ಕಳ್ಳತನವನ್ನು ತಡೆಯಬಹುದು.

 

ವೈರ್‌ಲೆಸ್‌ ಕ್ಯಾಮೆರಾಗಳನ್ನು ಮನೆಯಲ್ಲಿ ನಿಮಗೆ ಎಲ್ಲಿ ಬೇಕೋ ಅಲ್ಲಿ ಅಳವಡಿಸಿದರೆ ಆಯ್ತು. ಈ ಸ್ಮಾರ್ಟ್ ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯವನ್ನು ಮೊಬೈಲ್ ಮೂಲಕವೇ ವೀಕ್ಷಿಸಬಹುದು. ಕ್ಯಾಮೆರಾವನ್ನು ಯಾವ ಕಡೆಗೂ ಬೇಕಾದರೂ ತಿರುಗಿಸಿ ಝೂಮ್ ಮಾಡಬಹುದು. ಯಾರಾದರೂ ಪ್ರವೇಶಿಸಿದ್ದಲ್ಲಿ ಎಂ2ಎಂ ಅಪ್ಲಿಕೇಶನ್ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಲು ಸಾಧ್ಯವಿದೆ.

ಎಂ2ಎಂ ಸಿಮ್ ಯಾರು ಕೊಡ್ತಾರೆ?

ವಿದೇಶದಲ್ಲಿ ಈ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿದ್ದರೂ ಭಾರತದಲ್ಲಿ ಈಗಷ್ಟೇ ಹೆಚ್ಚು ಬಳಕೆಯಾಗುತ್ತಿದೆ. ಸ್ವೈಪಿಂಗ್ ಯಂತ್ರಗಳಲ್ಲಿ ಈ ತಂತ್ರಜ್ಞಾನವೇ ಬಳಕೆ ಆಗುತ್ತಿದೆ. ಬಿಎಸ್‍ಎನ್‍ಎಲ್, ಏರ್‍ಟೆಲ್, ವೊಡಾಫೋನ್, ಆರ್ ಕಾಂ ಕಂಪೆನಿಗಳು ಎಂ2ಎಂ ಸಿಮ್ ನೀಡುತ್ತಿವೆ. ಏರ್‍ಟೆಲ್ ಸ್ಮಾರ್ಟ್ ಮೀಟರ್, ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ ನಂತಹ ಸೌಲಭ್ಯಗಳನ್ನು ನೀಡುತ್ತಿದೆ.

ಮೂಲ:ಪಬ್ಲಿಕ್ ಟಿವಿ