ಅಪರಾಧ ಕೃತ್ಯಗಳಿಗೆ ಮೊಹಮ್ಮದ್ ಹ್ಯಾರಿಸ್ ಹೊಸಬರಲ್ಲ: ಹಳೆಯ ಪಟ್ಟಿ ದೊಡ್ಡದಿದೆ..!!

ರಾತ್ರಿ ವೇಳೆ ಪಬ್ ಮತ್ತು ರೆಸ್ಟೋರೆಂಟ್​ಗಳಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸುವುದು ಬೆಂಗಳೂರಿನ ಕಾಂಗ್ರೆಸ್ ಶಾಸಕ ಎಸ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ಹ್ಯಾರಿಸ್​ಗೆ ಹೊಸದೇನಲ್ಲ.

ಈ ರೀತಿಯ ಹಲವು ಅಪರಾಧ ಪ್ರಕರಣಗಳಲ್ಲಿ ಈ ಹಿಂದೆಯೂ ಮೊಹಮ್ಮದ್ ಹ್ಯಾರಿಸ್ ಭಾಗಿಯಾಗಿರುವ ಉದಾಹರಣೆಗಳಿವೆ. ಆದರೆ, ಪೊಲೀಸರು ಮಾತ್ರ ಪ್ರಭಾವಿ ಶಾಸಕನ ಪುತ್ರ ಎಂಬ ಮಾನದಂಡದಲ್ಲೇ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಕ್ರಮ ಜರುಗುಸುತ್ತಿಲ್ಲ ಎಂಬ ಆರೋಪವಿದೆ. ಹ್ಯಾರಿಸ್ ಪ್ರತಿನಿಧಿಸುವ ಶಾಂತಿನಗರ ಕ್ಷೇತ್ರದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬ್ಯುಸಿನೆಸ್ ಸೆಂಟರ್​ಗಳಾದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ರೆಸಿಡೆನ್ಸಿ ರಸ್ತೆ ಬರುತ್ತವೆ. ಈ ಪ್ರದೇಶದಲ್ಲಿ ತಂದೆ ಹ್ಯಾರಿಸ್ ಪ್ರಭಾವ ಬಳಸಿಕೊಂಡು ಹಣ ಸುಲಿಗೆ ಮಾಡುತ್ತಾರೆ ಎಂಬುದು ಇಲ್ಲಿನ ಪಬ್ ಮತ್ತು ರೆಸ್ಟೋರೆಂಟ್ ಮಾಲೀಕರ ಆರೋಪವಾಗಿದೆ.

`ತಮ್ಮ ಬಳಿ ಮೊಹಮ್ಮದ್ ಹ್ಯಾರಿಸ್ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಕೊನೆಯದಾಗಿ 50,0000 ರೂ. ನೀಡಿದೆ. ಆದರೆ, ನಮಗೆ ನಿಜವಾದ ಸಮಸ್ಯೆ ಎದುರಾಗಿರುವುದು ಪೊಲೀಸರಿಂದ. ಈ ವ್ಯಾಪ್ತಿಯಲ್ಲಿ ಬರುವ ಕಬ್ಬನ್ ಪಾರ್ಕ್ ಮತ್ತು ಅಶೋಕನಗರ ಪೊಲೀಸರೆಲ್ಲ ಶಾಸಕ ಹ್ಯಾರಿಸ್ ಆಪ್ತರಾಗಿದ್ದಾರೆ. ಹೀಗಾಗಿ, ಅವರ ಮಗನ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಹೆಸರನ್ನ ಹೇಳಲು ಇಚ್ಛಿಸದ ಪ್ರಸಿದ್ಧ ಪಬ್​ನ ಮಾಲೀಕರು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

2016ರಲ್ಲಿ ಮೊಹಮ್ಮದ್ ಹ್ಯಾರಿಸ್ ಶಾಂತಿನಗರದ ಪಬ್​ವೊಂದರಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಆದರೆ, ಪೊಲೀಸರೇ ಒತ್ತಡ ಹಾಕಿ ದೂರನ್ನ ಹಿಂಪಡೆದುಕೊಳ್ಳುವಂತೆ ಮಾಡಿದ ಆರೋಪವಿದೆ. ಅಷ್ಟೇ ಅಲ್ಲ, ಹಲ್ಲೆ ನಡೆಸಿದ ವ್ಯಕ್ತಿ ಹ್ಯಾರಿಸ್ ಮಗನೇ ಅಲ್ಲ, ಬೇರಾರೋ ಅವರ ಹೆಸರಲ್ಲಿ ಮಾಡಿದ್ದಾರೆ ಎಂದು ಸ್ವತಃ ಪೊಲೀಸರೇ ಪ್ರಕರಣ ಮುಚ್ಚಿ ಹಾಕಿದ್ದರು. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಸಹ ಸದ್ದಿಲ್ಲದೆ ಸುಮ್ಮನಾಗಿದ್ದವು.

ಕೆಲವು ತಿಂಗಳ ಹಿಂದೆ ಮತ್ತೊಂದು ಪ್ರಕರಣವನ್ನೂ ಇದೇ ರೀತಿ ಮುಚ್ಚಿಹಾಕಿದ ಆರೋಪ ಪೊಲೀಸರ ಮೇಲಿದೆ.

ಬಾಡಿಗಾರ್ಡ್ಸ್ ಮತ್ತು ಪುಂಡರ ಗುಂಪು ಕಟ್ಟಿಕೊಂಡು ಲ್ಯಾಟಿನ್ ಅಮೆರಿಕದ ಮಾದಕ ದ್ರವ್ಯ ವ್ಯಸನಿಗಳ ರೀತಿ ಅಲೆಯುವ ಮೊಹಮ್ಮದ್ ಹ್ಯಾರಿಸ್ ಕಂಡರೆ ಈ ಪ್ರದೇಶದ ಬಹುತೇಕರು ಬೆಚ್ಚಿ ಬೀಳುತ್ತಾರೆ. ತೀರಾ ಕ್ಷುಲ್ಲಕ ಕಾರಣಗಳಿಗೆ ಅಪರಿಚಿತರ ಜೊತೆ ನಿತ್ಯ ಕಿತಾಪತಿ ತೆಗೆಯುತ್ತಾನೆ ಎಂಬ ಆರೋಪವಿದೆ.

ಈತ ಎಂಥೆಂಥಾ ಸಣ್ಣ ಸಣ್ಣ ವಿಷಯಕ್ಕ ಜನರನ್ನ ಕಾಡುತ್ತಾನೆಂದರೆ, ಆತನನ್ನ ನೋಡಿದರೂ, ನಿಂತರೂ ಕೂತರೂ.. ಈತನ ವಾಹನವನ್ನ ಓವರ್ ಟೇಕ್ ಮಾಡಿದರೂ ಪ್ರತಿರೋಧ ಎದುರಿಸಬೇಕಾದ ಪರಿಸ್ಥಿತಿ ಸ್ಥಳೀಯ ಜನರದ್ದು.

ಮೊಹಮ್ಮದ್ ಹ್ಯಾರಿಸ್ ಇತ್ತೀಚೆಗೆ, ಯುವ ಕಾಂಗ್ರೆಸ್​ನ ಬೆಂಗಳೂರು ನಗರದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ನಿನ್ನೆ ಘಟನೆ ಬಳಿಕ ಮಗನ ಅಪರಾಧ ಕೃತ್ಯಗಳಿಂದ ತಂದೆ ಶಾಸಕ ಹ್ಯಾರಿಸ್ ಅಂತರ ಕಾಯ್ದುಕೊಳ್ಳಲು ಶುರುಮಾಡಿದ್ದಾರೆ. ಆದರೆ, ಮೊಹಮ್ಮದ್ ಹ್ಯಾರಿಸ್ ಈ ರೀತಿ ದುಂಡಾವರ್ತನೆಗೆ ತಂದೆಯ ಬೆಂಬಲವೇ ಕಾರಣ ಎಂಬುದು ಸ್ಥಳೀಯ ಆರೋಪ.

ನ್ಯೂಸ್ 18 ವರದಿ ಬಳಿಕ ಕಾಂಗ್ರೆಸ್ ಪಕ್ಷದಿಂದ ಮೊಹಮ್ಮದ್ ಹ್ಯಾರಿಸ್ ಉಚ್ಛಾಟನೆಯಾಗಿದ್ದು, ಮೊಹಮ್ಮದ್ ಹ್ಯಾರಿಸ್ ಯಾವಾಗಲೂ ತಮ್ಮ ರೌಡಿಸಂ ಮೂಲಕವೇ ಕುಖ್ಯಾತಿ ಗಳಿಸಿದವರು. ಶಾಲೆ ಮತ್ತು ಕಾಲೇಜು ಅವಧಿಯಲ್ಲೂ ಶಿಕ್ಷಕರು ಅವನನ್ನ ನೋಡಿದರೆ ಭಯಪಡುತ್ತಿದ್ದರು ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿ ಟ್ವೀಟ್ ಮಾಡಿದ್ದಾರೆ.

ಕೇರಳ ಮೂಲದವರಾದ ಹ್ಯಾರಿಸ್, ಬೆಂಗಳೂರಿನಲ್ಲಿರುವ ಪ್ರಸಿದ್ಧ ನಲಪಾಡ್ ಹೋಟೆಲ್ ಮತ್ತು ಬಾಂಕ್ವೆಟ್ ಹಾಲ್ ಮಾಲೀಕರಾಗಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಯುವ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಆರಂಭಿಸಿದ ಹ್ಯಾರಿಸ್, 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕೇರಳದ ಮಾಜಿ ಮುಖ್ಯಮಮತ್ರಿ ಉಮ್ಮನ್ ಚಾಂಡಿ ಸೇರಿದಂತೆ ಕೇರಳದ ಹಲವು ಕಾಂಗ್ರೆಸ್ ನಾಯಕರಿಗೆ ಹ್ಯಾರಿಸ್ ಆಪ್ತರಾಗಿದ್ದಾರೆ.

ಮೂಲ: ನ್ಯೂಸ್18

Post Author: Ravi Yadav