ಯೋಧ ಎದೆಗೆ ಗುಂಡು ಹೊಕ್ಕುತ್ತಿದ್ದರೂ 3 ಉಗ್ರರನ್ನು ಬೆನ್ನಟ್ಟಿ ಹತ್ಯೆಗೈದದು ಹೇಗೆ ಗೊತ್ತಾ..??

ಅವಿತು ಕುಳಿತಿದ್ದ ಉಗ್ರರಿಂದ ಸತತ ಗುಂಡಿನ ದಾಳಿ, ಎದೆಗೆ ಗುಂಡುಗಳು ಹೊಕ್ಕುತ್ತಿದ್ದರೂ ಉಗ್ರರು ತಪ್ಪಿಸಿಕೊಳ್ಳಲು ಬಿಡದೇ ಮೂವರು ಉಗ್ರರ ಹತ್ಯೆಗೈದ ಭಾರತೀಯ ವಾಯುಸೇನೆಯ ಗುರುಡಾ ಪಡೆಯ ಕಮಾಂಡೋ ವೀರ ಹುತಾತ್ಮ ಯೋಧ ಜ್ಯೋತಿ ಪ್ರಕಾಶ್ ನಿರಾಲ ಅವರ ಪತ್ನಿಗೆ ಶುಕ್ರವಾರ ಅಶೋಕ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದೆಹಲಿಯಲ್ಲಿ ನಡೆದ 69ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ವೀರ ಹುತಾತ್ಮ ಯೋಧ ಜ್ಯೋತಿ ಪ್ರಕಾಶ್ ನಿರಾಲ ಅವರ ಪತ್ನಿ ಮತ್ತು ತಾಯಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾರತೀಯ ಸೇನೆಯ ಗೌರವ ಪ್ರಶಸ್ತಿ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದರು. ಕಳೆದ 2017ರ ಸೆಪ್ಟೆಂಬರ್ ನಲ್ಲಿ ಕಾಶ್ಮೀರದ ಬಂಡಿಪೋರಾದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರನ್ನು ಜ್ಯೋತಿ ಪ್ರಕಾಶ್ ನರಾಲ ಅವರು ಹತ್ಯೆಗೈದು ತಾವೂ ಹುತಾತ್ಮರಾಗಿದ್ದರು.

ಎದೆಗೆ ಗುಂಡು ಹೊಕ್ಕುತ್ತಿದ್ದರೂ ತಪ್ಪಿಸಿಕೊಳ್ಳಲು ಬಿಡದೆ 3 ಉಗ್ರರ ಹತ್ಯೆಗೈದ ಜ್ಯೋತಿ ಪ್ರಕಾಶ್ ನಿರಾಲ..!!

ಕಳೆದ ಸೆಪ್ಟೆಂಬರ್ 18, 2017ರಲ್ಲಿ ಪಾಕಿಸ್ತಾನದ ಆರು ಮಂದಿ ಉಗ್ರರು ಭಾರತದ ಗಡಿಯೊಳಗೆ ನುಸುಳಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಭಾರತೀಯ ಸೇನೆ ವಾಯುಪಡೆಯ ಯೋಧರು ಹಾಗೂ ರಾಷ್ಟ್ರೀಯ ರೈಫಲ್ಸ್ ಪಡೆಯ ಯೋಧರು ಕಾರ್ಯಾಚರಣೆಗೆ ಇಳಿದಿದ್ದರು. ಅತ್ತ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ ಇತ್ತ ತಪ್ಪಿಸಿಕೊಳ್ಳಲು ಉಗ್ರರು ಯತ್ನಿಸಿದರು. ಈ ಪೈಕಿ ಮೂವರು ಉಗ್ರರು ಬಂಡಿಪೋರಾ ಬಳಿಯಿರುವ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು.

ಈ ವಿಚಾರ ತಿಳಿದ ಭಾರತೀಯ ವಾಯುಸೇನೆಯ ಗುರುಡಾ ಪಡೆಯ ಕಮಾಂಡೋ ಜ್ಯೋತಿ ಪ್ರಕಾಶ್ ನಿರಾಲ ನೇತೃತ್ವದ ತಂಡ ಆ ಮನೆಯನ್ನು ಸುತ್ತುವರೆದಿತ್ತು. ಸ್ವತಃ ಐಎಎಫ್ ಕಮಾಂಡೋ ನಿರಾಲ ಅವರು ಕಾರ್ಯಾಚರಣೆಯಲ್ಲಿ ತಾವೇ ಮುಂದಾಗಿ ನಿಂತು ಉಗ್ರರ ವಿರುದ್ಧ ದಾಳಿಗೆ ಮುಂದಾಗಿದ್ದರು. ಈ ವೇಳೆ ಉಗ್ರರು ಸೈನಿಕರನ್ನು ಗುರಿಯಾಗಿಸಿಕೊಂಡು ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದರು.

ಈ ವೇಳೆ ನಿರಾಲ ಉಗ್ರರಿಗೆ ತೀವ್ರ ಪ್ರತಿರೋಧ ತೋರಿದ್ದರು. ಲೈಟ್ ಮೆಷೀನ್ ಗನ್ ಹೊಂದಿದ್ದ ಕಾರ್ಪೋರಲ್ ನಿರಾಲಾ ಅವರು ಉಗ್ರರ ಮೇಲೆ ನಿರಂತರ ಗುಂಡಿನ ದಾಳಿ ನಡೆಸಿದರು. ಕಟ್ಟಡದಿಂದ ಉಗ್ರರು ಪರಾರಿಯಾಗಲು ಯತ್ನಿಸಿದ್ದರಾದರೂ, ಈ ಬಗ್ಗೆ ಮೊದಲೇ ಯೋಚಿಸಿದ್ದ ನಿರಾಲಾ ಉಗ್ರರ ಪರಾರಿಯ ಎಲ್ಲ ಮಾರ್ಗಗಳನ್ನು ತಡೆದಿದ್ದರು. ಈ ವೇಳೆ ಉಗ್ರರು ಆತ್ಮಾಹುತಿ ದಾಳಿ ಮುಂದಾಗಿದ್ದರು. ಒಂದು ವೇಳೆ ಉಗ್ರರ ಯೋಜನೆ ಫಲಿಸಿದ್ದೇ ಆಗಿದ್ದರೆ, ನಿರಾಲಾ ಜೊತೆಗಿದ್ದ ಹಲವು ಯೋಧರು ಸಾವನ್ನಪ್ಪುವ ಸಾಧ್ಯತೆ ಇತ್ತು. ಆದರೆ ಈ ಬಗ್ಗೆ ಅರಿತಿದ್ದ ಕಮಾಂಡೋ ನಿರಾಲಾ ಅತ್ಯುನ್ನತ ಶೌರ್ಯ ಪ್ರದರ್ಶನ ಮಾಡಿದರು.

ಉಗ್ರರು ಸಿಡಿಸುತ್ತಿದ್ದ ಗುಂಡುಗಳಿಗೆ ಅಂಜದೇ ಮುನ್ನುಗ್ಗಿದ ನಿರಾಲಾ ತಮ್ಮ ಗುಂಡಿನ ದಾಳಿ ಮೂಲಕ ಮೂವರು ಉಗ್ರರ ಮೈಗೆ ಗುಂಡುಗಳನ್ನು ಹೊಕ್ಕಿಸಿದರು. ಈ ವೇಳೆ ನಿರಾಲಾ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದರು. ಅತ್ತ ಸೇನೆಯ ಇತರೆ ತಂಡ ಕೂಡ ಮೂವರು ಉಗ್ರರನ್ನು ಹತ್ಯೆಗೈದಿತ್ತು. ಆದರೆ ಈ ಕಾರ್ಯಾಚರಣೆ ವೇಳೆ ನಿರಾಲಾ ಅವರ ಮೈಗೂ ಹಲವು ಗುಂಡುಗಳು ಹೊಕ್ಕಿದ್ದವು.

ನಿರಾಲಾ ಅವರ ಎದೆ, ಹೊಟ್ಟೆಯ ಭಾಗಕ್ಕೆ ಗುಂಡುಗಳು ಹೊಕ್ಕಿದ್ದವು. ಗುಂಡು ಹೊಕ್ಕಿದ್ದರೂ ಉಗ್ರರ ವಿರುದ್ಧ ದಾಳಿಯನ್ನು ಮಾತ್ರ ನಿರಾಲಾ ನಿಲ್ಲಿಸದೇ ದಾಳಿ ನಡೆಸಿದ್ದರಿಂದ ಉಗ್ರರು ಸಾಯುವಂತಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ನಿರಾಲಾ ಅವರನ್ನು ಕಾರ್ಪೋರಲ್ ಸೇನಾ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿರಾಲಾ ಸಾವನ್ನಪ್ಪಿದ್ದರು.

 

Post Author: Ravi Yadav