ಕಲಿಯುಗ ಎಂದರೇ ಏನು ಎನ್ನುವ ಪ್ರಶ್ನೆಗೆ ಕೃಷ್ಣ ನೀಡಿದ ಉತ್ತರವೇನು ಗೊತ್ತಾ??

ಕಲಿಯುಗ ಎಂದರೇ ಏನು ಎನ್ನುವ ಪ್ರಶ್ನೆಗೆ ಕೃಷ್ಣ ನೀಡಿದ ಉತ್ತರವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂದು ಶ್ರೀ ಕೃಷ್ಣ ಕಲಿಯುಗ ಎಂದರೇ ಏನು ಎನ್ನುವ ಪ್ರಶ್ನೆಗೆ ನೀಡಿದ ಉತ್ತರದ ಬಗ್ಗೆ ತಿಳಿದುಕೊಳ್ಳೋಣ. ನಿಮಗೆ ಈ ಪ್ರಶ್ನೆಗೆ ಕೃಷ್ಣನ ಉತ್ತರ ಅರ್ಥವಾಗಬೇಕು ಎಂದರೇ, ಈ ಲೇಖನವನ್ನು ಸಂಪೂರ್ಣ ನೀವು ಓದಲೇಬೇಕು. ಒಮ್ಮೆ ಮಹಾಭಾರತದ ಸಂಧರ್ಭದಲ್ಲಿ, ಯುಧಿಷ್ಠರನನ್ನು ಹೊರತುಪಡಿಸಿ, ಉಳಿದ ನಾಲ್ಕು ಪಾಂಡವರು ಕೃಷ್ಣನ ಬಳಿ ಹೋಗಿ, ಈ ಯುಗದ ನಂತರ ಉದಯವಾಗುವ ಕಲಿಯುಗ ಎಂದರೇನು ಎಂದು ಪ್ರಶ್ನೆ ಮಾಡುತ್ತಾರೆ !.

ಕೃಷ್ಣ ಈ ಪ್ರಶ್ನೆ ಕೇಳಿದ ತಕ್ಷಣ ಮುಗುಳ್ನಕ್ಕು ನಾನು ನಿಮಗೆ ಸಂಪೂಣವಾಗಿ ಕಲಿಯುಗ ಎಂದರೇ ಹೇಗಿರುತ್ತದೆ ಎಂಬುದನ್ನು ತೋರಿಸುತ್ತೇನೆ ಎಂದು ಹೇಳಿ, ಕೈಗೆ ಬಿಲ್ಲು ಹಾಗೂ ನಾಲ್ಕು ಬಾಣಗಳನ್ನು ತೆಗೆದುಕೊಂಡು ನಾಲ್ಕು ದಿಕ್ಕುಗಳಿಗೆ ಬಾಣಗಳನ್ನು ಹೊಡೆಯುತ್ತಾನೆ. ನಾಲ್ಕು ಜನ ಪಾಂಡವರಿಗೆ ಒಬ್ಬೊಬ್ಬರು ಒಂದು ದಿಕ್ಕಿಗೆ ತೆರಳಿ ಒಂದೊಂದು ಬಾಣಗಳನ್ನು ತೆಗೆದುಕೊಂಡು ಬರಲು ಹೇಳುತ್ತಾನೆ. ಹೀಗೆ ತನ್ನ ಉತ್ತರವನ್ನು ಆರಂಭಿಸಿದ ಕೃಷ್ಣ ನಾಲ್ಕು ದಿಕ್ಕುಗಳಿಗೆ ಬಾಣ ಬಿಟ್ಟ ನಂತರ, ನಾಲ್ಕು ಜನ ಪಾಂಡವರು (ಯುಧಿಷ್ಠರನನ್ನು ಹೊರತು ಪಡಿಸಿ) ಒಂದೊಂದು ದಿಕ್ಕುಗಳಿಗೆ ತೆರಳಿ ಬಾಣಗಳನ್ನು ಹುಡುಕಲು ಆರಂಭಿಸುತ್ತಾರೆ.

ಮೊದಲನೇಯದಾಗಿ ಅರ್ಜುನನು ಬಾಣವನ್ನು ಕಂಡು ಎತ್ತಿಕೊಳ್ಳಲು ಹೋದಾಗ ಅರ್ಜುನನಿಗೆ ಒಂದು ಮಧುರ ಸ್ವರವು ಕೇಳಿಸುತ್ತದೆ. ಶಬ್ದ ಬಂದ ಕಡೆ ತಿರುಗಿ ನೋಡಿದರೇ, ಒಂದು ಕೋಗಿಲೆಯು ಸಮ್ಮೋಹನಗೊಳಿಸುವ ಸ್ವರದಲ್ಲಿ ಹಾಡುತ್ತಿರುತ್ತದೆ. ಹಾಡುತ್ತ ಆ ಕೋಗಿಲೆಯು ಒಂದು ಇನ್ನೂ ಜೀವಂತವಾಗಿ ಬದುಕುಳಿದು ಯಾತನೆಯನ್ನು ಅನುಭವಿಸುತ್ತಿದ್ದ ಮೊಲದ ಮಾಂಸವನ್ನು ಕುಕ್ಕಿ ಕುಕ್ಕಿ ತಿನ್ನುತ್ತಿರುತ್ತದೆ. ಸ್ವರ ಕೇಳಿದರೇ ಅದ್ಭುತ ಎನಿಸಿದ ಅರ್ಜುನನಿಗೆ ಆ ಕೋಗಿಲೆ ಮಾಂಸ ತಿನ್ನುತಿದ್ದ ಕಾರಣ ನೋಡಲಾಗದೆ ಜಿಗುಪ್ಸೆಯಿಂದ ಅಲ್ಲಿಂದ ವಾಪಸ್ಸು ಕೃಷ್ಣನ ಬಳಿ ತೆರಳುತ್ತಾನೆ.

ಇನ್ನೂ ಬಾಣ ಹುಡುಕಲು ತೆರಳಿದ ಭೀಮನಿಗೆ ಐದು ಬಾವಿಗಳು ಕಾಣಿಸುತ್ತವೆ. ಆ ಐದು ಬಾವಿಗಳಲ್ಲಿ ನಾಲ್ಕು ಬಾವಿಗಳು ತುಂಬಿ ತುಳುಕುತ್ತಿರುತ್ತವೆ. ಹೀಗೆ ನಾಲ್ಕು ಬಾವಿಗಳು ತಮ್ಮಲ್ಲಿ ಇರುವ ನೀರನ್ನು ಹಿಡಿದಿಟ್ಟಿಕೊಳ್ಳಲು ಸಾಧ್ಯವಾಗದೇ ಹೊರಗಡೆ ನೀರು ಹರಿಯುತ್ತಿರುವ ಸಂದರ್ಭದಲ್ಲಿ ಮಧ್ಯದಲ್ಲಿ ಇದ್ದ ಐದನೇ ಬಾವಿ ಮಾತ್ರ ಬರಿದಾಗಿರುತ್ತದೆ. ಇದನ್ನು ಕಂಡು ಆಶ್ಚರ್ಯವಾದರೂ ಸೋಜಿಗದಿಂದ ನ್ಯಾಯವಲ್ಲ ಎಂದುಕೊಂಡು ಬಾಣವನ್ನು ತೆಗೆದುಕೊಂಡು ಕೃಷ್ಣ ಬಳಿ ವಾಪಸ್ಸು ಬರುತ್ತಾನೆ.

ಇನ್ನೂ ನಕುಲನಿಗೆ ನೀವು ನಂಬಲಾಗಂತಹ ಘಟನೆ ನಡೆಯಿತು. ಬಾಣವನ್ನು ತೆಗೆದುಕೊಂಡು ವಾಪಸ್ಸು ಬರುತ್ತಿರುವ ಸಂದರ್ಭದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿದ ದೃಶ್ಯವನ್ನು ಕಂಡನು. ಆ ಹಸು ಕರುವಿಗೆ ಜನ್ಮ ನೀಡಿದ ಕೂಡಲೇ ಕರುವನ್ನು ನೆಕ್ಕತೊಡಗಿತು. ಸಾಮಾನ್ಯವಾಗಿ ಎಲ್ಲ ಹಸುಗಳು ಜನ್ಮ ನೀಡಿದ ತಕ್ಷಣ ಕರುವಿನ ಮೈಯನ್ನು ಸ್ವಚ್ಛಗೊಳಿಸಲು ಈ ರೀತಿ ಮಾಡುತ್ತವೆ. ಆದರೆ ಹಸುವು ಸ್ವಚ್ಛವಾದ ಮೇಲೂ ನೆಕ್ಕುವುದನ್ನು ನಿಲ್ಲಿಸಲಿಲ್ಲ. ಹೀಗೆ ನೆಕ್ಕುತಿದ್ದ ಕಾರಣ ಕರುವಿನ ಚರ್ಮ ಕಿತ್ತು ಹೋಯಿತು. ಆದರೂ ಹಸು ನಿಲ್ಲಿಸಲಿಲ್ಲ ಇದನ್ನು ಕಂಡ ಸ್ಥಳೀಯರು ಹಸುವನ್ನು ಹೆದರಿಸಿ ಕರುವನ್ನು ತಾಯಿಯಿಂದ ದೂರ ಇರಿಸಿದರು.

ಕೊನೆಯದಾಗಿ ಸಹದೇವನು ತನ್ನ ಬಾಣವನ್ನು ಹುಡುಕುತ್ತ ಪರ್ವತವೊಂದರ ಬಳಿ ತೆರಳುತ್ತಾನೆ. ಅಲ್ಲಿ ಅವನಿಗೆ ಬಾಣ ಸಿಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಬೃಹತ್ ಬಂಡೆಯೊಂದು ಬೆಟ್ಟದ ಮೇಲಿಂದ ಉರುಳಿ ಬರುತ್ತದೆ. ವೇಗವಾಗಿ ಉರುಳುತ್ತಿದ್ದ ಕಾರಣ ತನ್ನ ದಾರಿಗೆ ಅಡ್ಡ ಬಂದ ಚಿಕ್ಕ ಚಿಕ್ಕ ಬಂಡೆಗಳನ್ನು ಪುಡಿಮಾಡುತ್ತಾ, ಮರಗಳನ್ನು ಉರುಳಿಸುತ್ತಾ ಸಾಗುತ್ತಿರುತ್ತದೆ. ಆದರೆ ಇದ್ದಕ್ಕೆ ಇದ್ದ ಹಾಗೇ ಒಂದು ಚಿಕ್ಕ ಗಿಡ ಅಡ್ಡ ಬಂದ ತಕ್ಷಣ ಆ ದೊಡ್ಡ ಬಂಡೆ ನಿಂತು ಬಿಡುತ್ತದೆ. ಈ ಸೋಜಿಗವನ್ನು ಕಂಡ ಸಹದೇವನು ಆಶ್ಚರ್ಯನಾಗಿ ಕೃಷ್ಣನ ಬಳಿ ವಾಪಸ್ಸು ಬರುತ್ತಾನೆ.

ಹೀಗೆ ವಾಪಸ್ಸು ಬಂದ ನಾಲ್ಕು ಪಾಂಡವರನ್ನು ಕೃಷ್ಣ ನೀವು ನೋಡಿದ ದೃಶ್ಯಗಳನ್ನು ಇತರರಿಗೂ ತಿಳಿಸುವಂತೆ ಆದೇಶ ನೀಡುತ್ತಾನೆ. ನಂತರ ಕೃಷ್ಣವು ಒಂದೊಂದೇ ದೃಶ್ಯಗಳನ್ನು ಎಲ್ಲರಿಗೂ ವಿವರಿಸಲು ಆರಂಭಿಸುತ್ತಾನೆ. ಮೊದಲನೇಯದಾಗಿ, ಕಲಿಯುಗದಲ್ಲಿ ಪುರೋಹಿತರು ಬಹಳ ಮಧುರವಾದ ಕಂಠವನ್ನು ಕೋಗಿಲೆಯಂತೆ ಹೊಂದಿರುತ್ತಾರೆ. ಆದರೆ ಕೋಗಿಲೆಯು ಮೊಲವನ್ನು ಕುಕ್ಕಿ ಕುಕ್ಕಿ ತಿಂದಂತೆ, ಕಲಿಯುಗದಲ್ಲಿ ಪುರೋಹಿತರು ಭಕ್ತರನ್ನು ಪೀಡಿಸುತ್ತಾರೆ ಎನ್ನುತ್ತಾನೆ. ನಂತರ ಕಲಿಯುಗದಲ್ಲಿ ಬಡವರು ಶ್ರೀಮಂತರ ಮಧ್ಯೆಯೇ ಬದುಕುತ್ತಾರೆ. ಆದರೆ ಆ ನಾಲ್ಕು ಬಾವಿಗಳಂತೆ ತುಂಬಿ ತುಳುಕುವ ಸಿರಿತನವನ್ನು ಹೊಂದಿದ್ದರೂ, ಯಾವೊಬ್ಬ ಶ್ರೀಮಂತರು ಬಡವರಿಗೆ ಬಿಡುಗಾಸನ್ನು ನೀಡುವುದಿಲ್ಲ ಎಂದನು.

ಮುಂದೆ ಹಸುವಿನ ಘಟನೆಯನ್ನು ವಿವರಿಸಿದ ಕೃಷ್ಣನು ಕಲಿಯುಗದಲ್ಲಿ ತಾಯಂದಿರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಎಂದರೇ ಅವರ ಪ್ರೀತಿಯು ಮಕ್ಕಳನ್ನು ಹಾಳು ಮಾಡುವಷ್ಟು ಹಾಗೂ ಅವರ ಜೀವನವನ್ನು ನಾಶ ಮಾಡುವಷ್ಟು ಎಂದು ಹೇಳುತ್ತಾನೆ. ಆ ಬಳಿಕ ಕೊನೆಯದಾಗಿ ಕಲಿಯುಗದಲ್ಲಿ ಬೆಟ್ಟದಿಂದ ಬೀಳುವ ಬೃಹತ್ ಬಂಡೆಯಂತೆ ಜನರು ತಮ್ಮ ಒಳ್ಳೆ ಗುಣಗಳನ್ನು ಕಳಚಿಕೊಂಡು ಅಧಃಪತನಕ್ಕೆ ಬೀಳುತ್ತಾರೆ. ಆಗ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೇವಲ ಭಗವಂತಹ ಸ್ಮರಣೆಯಿಂದ ಮಾತ್ರ ಆ ಪುಟ್ಟ ಗಿಡದಂತೆ ಕೆಳಗೆ ಜಾರದಂತೆ ಹಿಡಿದು ರಕ್ಷಿಸಬಹುದು ಎಂದು ಉತ್ತರ ನೀಡುತ್ತಾನೆ.