ಮುಳ್ಳಯ್ಯನಗಿರಿ ಮುಗಿಸಲು ರಾಜ್ಯ ಸರ್ಕಾರದ ಹೊಸ ಸ್ಕೆಚ್- ರೊಚ್ಚಿಗೆದ್ದ ಪರಿಸರವಾದಿಗಳು

ಮುಳ್ಳಯ್ಯನಗಿರಿ ಮುಗಿಸಲು ರಾಜ್ಯ ಸರ್ಕಾರದ ಹೊಸ ಸ್ಕೆಚ್- ರೊಚ್ಚಿಗೆದ್ದ ಪರಿಸರವಾದಿಗಳು

ವಿಶ್ವದಲ್ಲಿಯೇ ಅತಿ ಸೂಕ್ಷ್ಮವಾದ ಪ್ರದೇಶಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯದ ಮುಳ್ಳಯ್ಯನಗಿರಿ, ಇಡೀ ರಾಜ್ಯದಲ್ಲಿ ಅತ್ಯಂತ ಎತ್ತರದ ಗಿರಿಶಿಖರ ಎಂದು ಖ್ಯಾತಿ ಗಳಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಭಾಗವಾಗಿರುವ ಮುಳ್ಳಯ್ಯನಗಿರಿಗೆ ಇದೀಗ ದೊಡ್ಡ ಸಂಚಕಾರ ಎದುರಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಪ್ರದೇಶವನ್ನು ನಾಶಪಡಿಸುವುದು ಆರಂಭವಾಗುವುದು ಮೊದಲು ಕೇವಲ ರಸ್ತೆ ಎಂದು, ತದನಂತರ ಅಭಿವೃದ್ಧಿ, ಸೌಲಭ್ಯ, ಆಮೇಲೆ ಸರ್ಕಾರದಿಂದ ಪ್ರವಾಸಿ ಮಂದಿರ. ಇಷ್ಟೆಲ್ಲ ಮುಗಿದ ಮೇಲೆ ದೊಡ್ಡ ದೊಡ್ಡ ರೆಸಾರ್ಟ್ಗಳು, ಹೋಂಸ್ಟೇಗಳು ಬಂದರೆ ಅಲ್ಲಿಗೆ ಪ್ರವಾಸಿತಾಣದ ಕತೆ ಮುಗಿಯಿತು. ಪ್ರವಾಸಿ ತಾಣವು ಜನರನ್ನು ಆಕರ್ಷಿಸುವಲ್ಲಿ ಮಾತ್ರ ಯಶಸ್ವಿಯಾಗುತ್ತದೆ. ಆದರೆ ತನ್ನ ಪ್ರಕೃತಿ ಸೌಂದರ್ಯವನ್ನು ಕಳೆದುಕೊಂಡು ಅಳಿವಿನ ಅಂಚಿಗೆ ಜಾರುತ್ತದೆ.

ಇದೀಗ ಕರ್ನಾಟಕ ರಾಜ್ಯದ ಗರಿ ಎಂಬಂತೆ ಬಿಂಬಿತವಾಗಿರುವ ಮುಳ್ಳಯ್ಯನಗಿರಿ ಬೆಟ್ಟಕ್ಕೂ ಇದೆ ರೀತಿಯ ಸಂಚಕಾರ ಎದುರಾಗಿದೆ. ಹೌದು ರಸ್ತೆ ಅಗಲೀಕರಣದ ಹೆಸರಿನಲ್ಲಿ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಇರುವ ಕಲ್ಲುಗಳನ್ನು ಇದೀಗ ರಾಜ್ಯ ಸರ್ಕಾರ ಸ್ಫೋಟಿಸಲು ಆರಂಭಿಸಿದೆ. ರಸ್ತೆ ನೆಪದಲ್ಲಿ ಬ್ಲಾಸ್ಟ್ ಮಾಡ್ತಿರೋರು ನಾಳೆ ಅಭಿವೃದ್ಧಿ ಹೆಸರಲ್ಲಿ ಹೋಂ ಸ್ಟೇ, ರೆಸಾರ್ಟ್, ಬಿಲ್ಡಿಂಗ್ ನಿರ್ಮಿಸುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ, ಮುಳ್ಳಯ್ಯನಗಿರಿಯನ್ನು ಮುಂದಿನ ಪೀಳಿಗೆಯವರು ಬರೀ ಫೋಟೋ, ವಿಡಿಯೋ ಅಥವಾ ಹಿರಿಯರ ವರ್ಣನೆಯಲ್ಲಿ ನೋಡಬೇಕಾಗುತ್ತದೆ ಎಂದು ಪರಿಸರವಾದಿ ಗಿರಿಜಾಶಂಕರ್ ಗರಂ ಆಗಿದ್ದಾರೆ. ಒಂದು ವೇಳೆ ಈ ಕಾಮಗಾರಿ ಇಲ್ಲಿಗೆ ನಿಲ್ಲದೆ ಇದ್ದಲ್ಲಿ ಸಮುದ್ರಮಟ್ಟದಿಂದ ಬರೋಬ್ಬರಿ 6300 ಅಡಿ ಎತ್ತರವಿರುವ ಗಿರಿ-ಶಿಖರ, ಆಕಾಶದಷ್ಟು ಕಾಣುವ ಬೆಟ್ಟಗಳು, ತಣ್ಣನೆಯ ಗಾಳಿ ಹಾಗೂ ವರ್ಷಪೂರ್ತಿ ಮಳೆ ಸುರಿಯುವ ಪ್ರದೇಶ ಎಂದೆಲ್ಲಾ ನಾಮಾಂಕಿತ ವಾಗಿರುವ ಮುಳ್ಳಯ್ಯನಗಿರಿಯ ಕಾಂಕ್ರೀಟ್ ನಾಡಾಗಿ ಬದಲಾಗಲಿದೆ.