ತಮ್ಮ ನಾಯಕತ್ವದ ತಾಕತ್ತು ನಿರೂಪಿಸಿದ ಬಿಎಸ್ ವೈ, ಒಮ್ಮೆ ಅಖಾಡಕ್ಕೆ ಇಳಿದರೆ ಸೋತ ಇತಿಹಾಸವೇ ಇಲ್ಲ

ತಮ್ಮ ನಾಯಕತ್ವದ ತಾಕತ್ತು ನಿರೂಪಿಸಿದ ಬಿಎಸ್ ವೈ, ಒಮ್ಮೆ ಅಖಾಡಕ್ಕೆ ಇಳಿದರೆ ಸೋತ ಇತಿಹಾಸವೇ ಇಲ್ಲ

ಈಗಾಗಲೇ ಕರ್ನಾಟಕದ 28ಲೋಕಸಭಾ ಕ್ಷೇತ್ರಗಳಲ್ಲಿಯೂ ಚುನಾವಣೆ ಮುಗಿದು ದೇಶದ ಭವಿಷ್ಯ ರೂಪಿಸುವ ಚುನಾವಣೆಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಇಂತಹ ಸಮಯದಲ್ಲಿ ದೋಸ್ತಿಗಳ ಸಂಖ್ಯಾಬಲವನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರವಹಿಸುವ ವಿಧಾನಸಭಾ ಉಪಚುನಾವಣೆಯ ಕಣ ಗಳು ಈಗಾಗಲೇ ರಂಗೇರಿದೆ. ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾದವ್ ರವರ ರಾಜೀನಾಮೆಯಿಂದ ತೆರವಾದ ಚಿಂಚೋಳಿ ಕ್ಷೇತ್ರದಲ್ಲಿ ಇದೀಗ ಚುನಾವಣೆಯ ಕಾವು ಏರಿದೆ. ಬಿಜೆಪಿ ಪಕ್ಷದ ಹೈಕಮಾಂಡ್ ಈಗಾಗಲೇ ಉಮೇಶ್ ಜಾದವ್ ರವರ ಪುತ್ರ ಅವಿನಾಶ್ ಜಾದವ್ ಅವರಿಗೆ ಟಿಕೆಟ್ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದೆ.

ಆದರೆ ಶಿಸ್ತಿನ ಪಕ್ಷ ಎಂದು ಹೆಸರು ಪಡೆದುಕೊಂಡಿರುವ ಬಿಜೆಪಿ ಪಕ್ಷದಲ್ಲಿ ಭಿನ್ನಮತದ ಮಾತುಗಳು ಕೇಳಿಬಂದಿತ್ತು, ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾದವ್ ರವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ನಂತರ ನಡೆಯುತ್ತಿರುವ ಚುನಾವಣೆ ಇದಾಗಿರುವ ಕಾರಣ ಉಮೇಶ್ ಜಾದವ್ ರವರ ಪುತ್ರ ಅವಿನಾಶ್ ಜಾದವ್ ರವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಿ ಸ್ಪರ್ಧಿಸುವಂತೆ ಬಿಜೆಪಿ ಪಕ್ಷದ ಹೈಕಮಾಂಡ್ ಆದೇಶ ನೀಡಿತ್ತು. ಆದರೆ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಕಷ್ಟಪಟ್ಟು ದುಡಿದ ಕೆಲವು ನಾಯಕರು ಇದರ ವಿರುದ್ಧ ಧ್ವನಿಯೆತ್ತಿದ್ದರು.

ಸಾಮಾನ್ಯವಾಗಿ ಬಿಜೆಪಿ ಪಕ್ಷದಲ್ಲಿ ಈ ರೀತಿಯ ಕಲಹಗಳು ಕೇಳಿ ಬರುವುದು ತುಂಬಾ ಅಪರೂಪ. ಆದರೆ ಇದೀಗ ಎಲ್ಲರೂ ಊಹಿಸಿದಂತೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪನವರು ಅಖಾಡಕ್ಕೆ ಇಳಿದು ಭಿನ್ನಮತವನ್ನು ಕ್ಷಣಮಾತ್ರದಲ್ಲಿ ನಿವಾರಣೆ ಮಾಡಿದ್ದಾರೆ ಹಾಗೂ ಈ ಮೂಲಕ ಮತ್ತೊಮ್ಮೆ ಬಿಜೆಪಿ ಪಕ್ಷದ ಹೈಕಮಾಂಡಿಗೆ ತಮ್ಮ ನಾಯಕತ್ವದ ತಾಕತ್ತು ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಹಲವಾರು ದಿನಗಳಿಂದ ಯಡಿಯೂರಪ್ಪನವರ ನಾಯಕತ್ವದ ಮೇಲೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು ಆದರೆ ಈ ಎಲ್ಲಾ ಪ್ರಶ್ನೆಗಳಿಗೂ ಒಮ್ಮೆಲೇ ಬಿಎಸ್ವೈ ರವರು ಉತ್ತರ ನೀಡಿದ್ದಾರೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಂಡಾಯದ ಸೂಚನೆ ನೀಡಿದ್ದ ಸುನಿಲ್ ವಲ್ಯಾಪುರೆ ರವರ ಜೊತೆ ಮಾತನಾಡಿದ ಯಡಿಯೂರಪ್ಪನವರು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವೊಲಿಸಿದ್ದಾರೆ. ಈ ಬಗ್ಗೆ ಸ್ವತಹ ಸುನಿಲ್ ರವರು ಮಾಧ್ಯಮಗಳ ಮುಂದೆ ಬಿಜೆಪಿ ಪಕ್ಷಕ್ಕೆ ಮತ್ತೊಮ್ಮೆ ಸರ್ಕಾರ ರಚನೆ ಮಾಡುವ ಅವಕಾಶ ಬಂದಿದೆ, ಈ ಸಂದರ್ಭದಲ್ಲಿ ಬಂಡಾಯದ ಮಾತನಾಡದೆ ತ್ಯಾಗ ಮಾಡು ಎಂದು ಯಡಿಯೂರಪ್ಪನವರು ಹೇಳಿದ್ದಾರೆ. ಅವರು ಹೇಳಿದ ಮೇಲೆ ಮುಗಿಯಿತು, ಅವರ ಮಾತಿನಂತೆ ನಾನು ಪಕ್ಷಕ್ಕಾಗಿ ತ್ಯಾಗ ಮಾಡುತಿದ್ದೇನೆ. ಉಮೇಶ್ ಜಾದವ್ ರವರು ಬಿಜೆಪಿ ಪಕ್ಷಕ್ಕೆ ಬರುವ ಮುನ್ನವೇ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಅವರ ಕುಟುಂಬಕ್ಕೆ ನೀಡುವುದಾಗಿ ರಾಷ್ಟ್ರೀಯ ಅಧ್ಯಕ್ಷರು ಭರವಸೆ ನೀಡಿದ್ದರು, ಕೊಟ್ಟ ಮಾತನ್ನು ಇಂದು ಬಿಜೆಪಿ ಪಕ್ಷದ ಹೈಕಮಾಂಡ್ ಉಳಿಸಿಕೊಂಡಿದೆ ಅದಕ್ಕಾಗಿ ನಾನು ತ್ಯಾಗ ಮಾಡುತಿದ್ದೇನೆ. ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.